ಹಗಲು ಸೂರ್ಯ ರಾತ್ರಿ ಚಂದ್ರ ಬೆಳಕು ಕೊಡಬಲ್ಲ. ಆದರೆ ಸರ್ವಕಾಲದಲ್ಲಿ ಸರ್ವರಿಗೂ ಬೆಳಗು ಕೊಡುವುದು ಧರ್ಮವೊಂದೇ. ಧರ್ಮದಲ್ಲಿರುವ ದೂರದೃಷ್ಟಿ ವೈಶಾಲ್ಯತೆ ಮನೋಭಾವ ಜಾತಿಯಲ್ಲಿ ಕಾಣಲಾಗದು. ಜಾತಿಗಿಂತ ಧರ್ಮ ದೊಡ್ಡದು. ಪವಿತ್ರ ಧರ್ಮವನ್ನು ಪರಿಪಾಲಿಸುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತವಾಗಲು ಸಾಧ್ಯವಾಗುತ್ತದೆ. ಮಾನವ ಜೀವನ ಅಮೂಲ್ಯ. ಇದು ದೇವರು ಕೊಟ್ಟ ಕೊಡುಗೆ. ಪವಿತ್ರ ಮಾನವ ಜೀವನ ಕೊಟ್ಟು ಬದುಕಲಿಕ್ಕೆ ನೀರು ಅನ್ನ ಗಾಳಿ ಬೆಳಕು ಕೊಟ್ಟ ದೇವರಲ್ಲಿ ನಮ್ಮ ನಂಬಿಕೆ ಅಚಲವಾಗಿರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ಪಟ್ಟರು.
ಅವರು ಭಾನುವಾರ ಮೂಡಿಗೆರೆ ತಾಲೂಕಿನ ಬಿ. ಹೊಸಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ನೂತನ ದೇವಾಲಯವನ್ನು ಉದ್ಘಾಟಿಸಿ ದೇವತಾ ವಿಗ್ರಹವನ್ನು ಪ್ರತಿಷ್ಠಾಪಿಸಿ ಕಳಸಾರೋಹಣ ನೆರವೇರಿಸಿ ನಂತರ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ದೇವನೊಬ್ಬ ನಾಮ ಹಲವು ಎನ್ನುವಂತೆ ಜಗತ್ ಸೃಷ್ಟಿಗೆ ಭಗವಂತನೇ ಮೂಲ ಕಾರಣ. ಆತನಿಗೆ ಹೆಸರುಗಳು ಮಾತ್ರ ಅನಂತ. ಯಾವ ಹೆಸರಿನಿಂದ ಕರೆದರೂ ಓಗೊಡುವ ಪರಮಾತ್ಮ ಒಬ್ಬನೇ ಎಂಬ ಭಾವನೆ ಎಲ್ಲರಲ್ಲಿ ಬೆಳೆದು ಬಂದಾಗ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಬೆಳೆಯಲು ಸಾಧ್ಯವಾಗುತ್ತದೆ. ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ಅವತರಿಸಿ ಬಂದಾತನೆ ಶ್ರೀ ವೀರಭದ್ರಸ್ವಾಮಿ. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರಪುರುಷನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿ ಬಿ ಹೊಸಳ್ಳಿ ಗ್ರಾಮದಲ್ಲಿ ನೆಲೆಸಿರುವುದು ತಮ್ಮೆಲ್ಲರ ಸೌಭಾಗ್ಯವೆಂದು ಭಾವಿಸುತ್ತೇವೆ. ಸುಂದರ ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ದಾನಿಗಳಿಗೆ ಭಗವಂತ ಒಳ್ಳೆಯದನ್ನು ಉಂಟುಮಾಡಲೆಂದು ಶುಭ ಹಾರೈಸಿದರು.

ದಾನಿಗಳಾದ ನಟರಾಜ ಶರ್ಮ ಅವರು ಪವಿತ್ರ ಧರ್ಮ ಸಮಾರಂಭವನ್ನು ಉದ್ಘಾಟಿಸಿದರು. ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮತ್ತು ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.
ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಎಚ್. ಎಂ. ಮಂಜುನಾಥ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಶಾಸಕ ಕುಮಾರಸ್ವಾಮಿ, ಮೂಡಿಗೆರೆ ವೀರಶೈವ ಸಮಾಜದ ಅಧ್ಯಕ್ಷ ಓಂಕಾರ, ವೀರಶೈವ ರಾಜ್ಯ ಸಮಿತಿಯ ಸದಸ್ಯರಾದ ಪೂರ್ಣೇಶ್ ಆಲ್ದೂರು, ಶ್ರೀ ಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆಯಿತ್ತು ಶುಭ ಹಾರೈಸಿದರು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸಮಾರಂಭದ ನಂತರ ಆಗಮಿಸಿದ ಎಲ್ಲ ಸದ್ಭಕ್ತರಿಗೆ ಅನ್ನದಾಸೋಹ ಜರುಗಿತು.




