ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ಜನತಾ ಬಜೆಟ್ ಮಂಡನೆ ಮಾಡುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಒತ್ತಾಯಿಸಿದರು.
ಅವರು ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಆಶ್ವಾಸನೆಗಳು ಇಲ್ಲಿಯವರೆಗೂ ಈಡೇರಿಸಿಲ್ಲ. ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಎಲ್ಲಾ ಯೋಜನೆಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ದಲಿತ ಸಮುದಾಯದ, ರೈತರ ಮತ್ತು ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ಎಲ್ಲಾ ಅಂಶಗಳಿರುವ ಹಕ್ಕೊತ್ತಾಯ ಪ್ರತಿಯನ್ನು ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಜನಾಗ್ರಹ ಸಮಾವೇಶದಲ್ಲಿ ರಾಜ್ಯ ಸರ್ಕಾರಕ್ಕೆ ನೀಡಲಾಗಿದ್ದು, ಮುಂಬರುವ ಮಾರ್ಚ್‍ನಲ್ಲಿ ಮಂಡಿಸಲಿರುವ ಬಜೆಟ್‍ನಲ್ಲಿ ನಮ್ಮ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ವರ್ಷದ ಬಜೆಟ್‍ನಲ್ಲಿ ಶೇ.10-11% ಹಂಚಿಕೆಯಾಗಿತ್ತು. ಆದರೆ ಇದು ದೇಶದ ಸರಾಸರಿಗಿಂತ ಕಡಿಮೆಯಾಗಿತ್ತು. ಹೀಗಾಗಿ ಈ ಬಾರಿಯ ಬಜೆಟ್‍ನ ಕನಿಷ್ಠ 20% ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಸರ್ಕಾರಿ ಶಾಲೆಗಳ ಆಧುನೀಕರಣಕ್ಕೆ ರೂ. 10ಸಾವಿರ ಕೋಟಿ, ಉರ್ದು ಮಾಧ್ಯಮ ಶಾಲೆಗಳ ಸಮಗ್ರ ಅಭಿವೃದ್ಧಿಗೆ ರೂ.2 ಸಾವಿರ ಕೋಟಿ, ಪ್ರಾಥಮಿಕ ಹಂತದ ಸ್ನಾತಕೋತ್ತರ ಹಂತದವರೆಗೂ ಸಂಪೂರ್ಣ ಉಚಿತ ಶಿಕ್ಷಣ ನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ, ಕರ್ನಾಟಕದ ಸ್ಥಳಿಯ ಅಗತ್ಯಗಳಿಗೆ ತಗಲುವ ನೀತಿಯನ್ನು ಬಲಪಡಿಸಬೇಕೆಂದು ಹೇಳಿದರು.
ಭೂಮಿ ಹಕ್ಕು, ವಸತಿ ಮತ್ತು ಸೇವಾ ಕ್ಷೇತ್ರದಲ್ಲಿ ಭೂಹೀನ ಬಡವರು, ಎಸ್.ಸಿ ಎಸ್.ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ತಕ್ಷಣ ಭೂಮಿ ಹಕ್ಕು ನೀಡಬೇಕು. ಕಾರ್ಮಿಕ ಕಲ್ಯಾಣಕ್ಕಾಗಿ ಹೆಚ್ಚು ಆದ್ಯತೆ ಮತ್ತು ಯುವನಿಧಿ ಯೋಜನೆಯನ್ನು ವಿಸ್ತರಿಸಿ ನಿರುದ್ಯೋಗ ಭತ್ಯೆಯನ್ನು ರೂ. 5 ಸಾವಿರಕ್ಕೆ ಹೆಚ್ಚಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರೂ. ಒಂದು ಸಾವಿರ ಕೋಟಿ ಮೀಸಲಿಡುವಂತೆ ಒತ್ತಾಯಿಸಿದರು.
ರಾಜ್ಯ ವಿಪತ್ತು ಪರಿಹಾರ ನಿಧೀಯನ್ನು ದ್ವಿಗುಣಗೊಳಿಸಿ ರೂ. 5 ಸಾವಿರ ಕೋಟಿಗೆ ಹೆಚ್ಚಿಸಬೇಕು. ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್‍ಗೆ ರೂ. 50 ಸಾವಿರ ಮತ್ತು ಮನೆ ನಷ್ಟಕ್ಕೆ ರೂ. 5 ಲಕ್ಷ ಪರಿಹಾರ ನೀಡಬೇಕು. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ತಿಳಿಸಿದರು.
ಸಾಮಾಜಿಕ ಭದ್ರತೆಯಡಿಯಲ್ಲಿ ನೀಡುತ್ತಿರುವ ವಿವಿಧ ಪಿಂಚಣಿ ಮೊತ್ತವನ್ನು ದುಪ್ಪಟ್ಟು ಮಾಡಬೇಕು. ಯುವ ಸಬಲೀಕರಣಕ್ಕಾಗಿ ಹೋಬಳಿ, ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟಕ್ಕೆ ಮೂಲಸೌಕರ್ಯ ಒದಗಿಸುವಿಕೆ ಮತ್ತು ವಿಶೇಷ ತರಬೇತಿ ಕಾರ್ಯಗಾರಗಳನ್ನು ಏರ್ಪಡಿಸಬೇಕೆಂದರು.
ಎಸ್.ಸಿ, ಎಸ್.ಟಿ ಸಮುದಾಯದ ಕಾಲೋನಿ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲಿಡಬೇಕು. ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆಯ ಕಟ್ಟಡ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ಹಂಚಿಕೆ, ಕರಾವಳಿ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ವಿಶೇಷ ಪ್ಯಾಕೇಜ್, ಟಿಪ್ಪುಸುಲ್ತಾನ್ ತಾಣಗಳ ಅಭಿವೃದ್ಧಿಗೆ 150 ಕೋಟಿ, ಯುನೆಸ್ಕೋ ಸೈಟ್‍ಗಳಿಗೆ 200 ಕೋಟಿ, ಅಲ್ಪಸಂಖ್ಯಾತರ ಸಮಗ್ರ ಕಲ್ಯಾಣಕ್ಕಾಗಿ ಕನಿಷ್ಠ 15 ಸಾವಿರ ಕೋಟಿ. ಕ್ರೈಸ್ತ, ಜೈನ್, ಬೌದ್ಧ ಸಮುದಾಯಕ್ಕೆ 1 ಸಾವಿರ ಕೋಟಿ ಪ್ರತ್ಯೇಕವಾಗಿ ಮೀಸಲಿಡುವಂತೆ ಒತ್ತಾಯಿಸಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಮುಸ್ತಾಫ ಆಲ್ದೂರು ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಹೃದ್ರೋಗ ಜಯದೇವ ಘಟಕ ಪ್ರಾರಂಭಿಸಬೇಕು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಉನ್ನತಿಕರಿಸಬೇಕು. ಆಲ್ದೂರು ಸಾರ್ವಜನಿಕ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಣ ಮಾಡುವಂತೆ ಹೇಳಿದರು.
ಸರ್ಕಾರಿ ಉರ್ದು ಶಾಲೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ಮತ್ತು ಅನುದಾನ ಮೀಸಲಿಡಬೇಕು. ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ಅಲ್ಪಸಂಖ್ಯಾತ ಉರ್ದು ಕಾಲೇಜು ಸ್ಥಾಪಿಸಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಫಸಲು ಮತ್ತು ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ಮತ್ತು ಪರಿಹಾರಕ್ಕಾಗಿ ಹೆಚ್ಚು ಹಣ ಮೀಸಲಿಡುವಂತೆ ಒತ್ತಾಯಿಸಿದರು.
ವಸತಿ ರಹಿತರಿಗೆ ವಸತಿ ಕಲ್ಪಸಿಕೊಡಬೇಕು. ಅಡಿಕೆ ಬೆಳೆ ರೋಗ ನಿರೋಧಕ್ಕಾಗಿ ವೈಜ್ಞಾನಿಕ ಕ್ರಮಕ್ಕಾಗಿ ಆದ್ಯತೆ ನೀಡಬೇಕು ಮತ್ತು ಸೂಕ್ತ ಪರಿಹರಕ್ಕಾಗಿ ಗರಿಷ್ಠ ಮೊತ್ತ ಮೀಸಲಿಡಬೇಕು. ಪ್ರಮುಖ ಕೃಷಿ ಬೆಳೆಯಾದ ಕಾಫಿ ಉತ್ಪಾದನೆಗೆ ಸಂಬಂಧಿಸಿದಂತೆ ಹೆಚ್ಚು ಪ್ರೋತ್ಸಾಹ ನೀಡುವ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ಸದರಿ ಬೆಳೆಗೆ ಪ್ರೊಸೆಸಿಂಗ್ ಸೌಲಭ್ಯ ಸಂಗ್ರಹಣಾ ಕೇಂದ್ರ, ಮಾರುಕಟ್ಟೆ ಬೆಂಬಲ ಬೆಲೆ ಇನ್ನಿತರ ಕಾಫಿಗೆ ಪೂರಕ ಯೋಜನೆಗಳನ್ನು ರೂಪಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‍ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮುಬಾರಕ್, ಮುಖಂಡರಾದ ಕೆ.ಪಿ.ಖಾಲಿದ್, ಅಜ್ಮತ್ ಪಾಷ, ಅಜ್ನಮ್ ಶರೀಫ್, ತಜನಮ್, ಆದಮ್ ಉಪಸ್ಥಿತರಿದ್ದರು.



