ಶಾಲೆಯ ಅಮೃತ ಮಹೋತ್ಸವದ ಸಂಚಿಕೆಯು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಅಕ್ಷರ ಪ್ರೇಮಿಗಳಿಗೆ ಜ್ಞಾನ ಭಂಡಾರದ ಉಗ್ರಾಣವಾಗಿದೆ. ಉತ್ತಮ ಪುಸ್ತಕಗಳು ನಮ್ಮ ಭವಿಷ್ಯದ ಬೆಳಕಿನ ಹಾದಿಯ ದೀವಿಗೆಯಾಗಿದೆ’ ಎಂದು ಶಾಲಾ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ.ಎಂ.ಸತೀಶ್ ಹೇಳಿದರು.
ಅವರು ಮೂಡಿಗೆರೆ ತಾಲ್ಲೂಕು ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತವರ್ಷಿಣಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಶಾಲೆಯಲ್ಲಿ ಕಲಿತು ಹೋದ ವಿದ್ಯಾರ್ಥಿಗಳು ಉತ್ತಮ ಹುದ್ದೆಗಳಲ್ಲಿ ಭವಿಷ್ಯ ರೂಪಿಸಿಕೊಂಡಿದ್ದಾರೆ. ತಾವು ಓದಿದ ಶಾಲೆಯ ಬಗ್ಗೆ ನಂಟು ಹೊಂದಿ ಕಲಿಸಿದ ಗುರುಗಳೊಂದಿಗೆ ಸಂಪರ್ಕ ಮಾಡಿ ಶಾಲೆಯ ಅಮೃತ ಮಹೋತ್ಸವದ ಸಂಚಿಕೆಯಲ್ಲಿ ತಮ್ಮ ಶಾಲೆಯ ಅನುಭವ, ಶಿಕ್ಷಕರ ಬೋಧನೆ ಮತ್ತಿತರ ಅನೇಕ ಯುವ ಪೀಳಿಗೆಗೆ ಅಗತ್ಯ ಎನಿಸಿದ ವಿಷಯಗಳನ್ನು ಬರೆದು ಜ್ಞಾನ ಹೆಚ್ಚಿಸುವಲ್ಲಿ ಸಹಕರಿಸಿದ್ದಾರೆ. ಸಮಿತಿಯ ಎಲ್ಲರಿಗೂ ಹಾಗೂ ಸಂಚಿಕೆ ಹೊರ ತರಲು ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.
ಮುಖಂಡ ಟಿ.ಎಂ.ಗಜೇಂದ್ರ ಮಾತನಾಡಿ ‘ ವಾಜಪೇಯಿ ಸರ್ಕಾರ ಆಳವಿಕೆಯಲ್ಲಿ ಸರ್ವ ಶಿಕ್ಷಣ ಅಭಿಯಾನದಲ್ಲಿ ತಾಲೂಕಿನಲ್ಲಿ ಅತ್ತಿಗೆರೆ ಶಾಲೆಗೆ ಪ್ರಥಮವಾಗಿ ಗ್ರಾಮಸ್ಥರ ಶಿಕ್ಷಕರ ನೆರವಿನಿಂದ ಶಾಲಾ ಕಾಂಪೌಂಡ್ ನಿರ್ಮಾಣವಾಯಿತು. ಸರ್ಕಾರಿ ಶಾಲೆ ಉಳಿಸಲು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಕೈಜೋಡಿಸಬೇಕು. ಏಳನೇ ತರಗತಿ ವಿದ್ಯಾರ್ಥಿಗಳು ಸ್ಥಳೀಯ ಪ್ರೌಢಶಾಲೆಗೆ ಮಕ್ಕಳನ್ನು ಸೇರಿಸುವ ಮೂಲಕ ಸಹಕರಿಸಬೇಕು. ವಿದ್ಯಾರ್ಥಿಗಳು ಕನಸನ್ನು ಕಂಡು ಕನಸನ್ನು ಸಾಕಾರಗೊಳಿಸುವತ್ತ ಪರಿಶ್ರಮ ಪಡಬೇಕು. ಅಮೃತ ಮಹೋತ್ಸವ ಉತ್ತಮ ರೀತಿಯಲ್ಲಿ ನಡೆದಿದೆ. ಹಾಗೆಯೆ ಶಾಲೆಯ ಸಂಚಿಕೆ ಸೊಗಸಾಗಿ ಮೂಡಿ ಬಂದಿದ್ದು ವಿಷಯಗಳನ್ನು ಆಚಾರ ವಿಚಾರಗಳನ್ನು ಸಾರ್ವಜನಿಕ ವಲಯಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದರು.
ಪ್ರಭಾರಿ ಮುಖ್ಯ ಶಿಕ್ಷಕಿ ಕೆ.ಕವಿತ ಮಾತನಾಡಿ ‘ವಿದ್ಯಾರ್ಥಿಗಳು ಕಲಿತು ಹೋದ ಶಾಲೆಯನ್ನು ಶಿಕ್ಷಕರನ್ನು ಮರೆಯಬಾರದು. ಯುವ ಪೀಳಿಗೆಯಿಂದ ಉತ್ತಮ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಅಮೃತ ಮಹೋತ್ಸವ ನಡೆಸಲು ಸಹಕಾರ ನೀಡಿದ ಎಲ್ಲ ಸಮಿತಿ ಹಾಗೂ ಧಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಚಿಕೆ ಹೊರ ತರಲು ವಿವಿಧ ರೀತಿಯಲ್ಲಿ ಸಹಕರಿಸಿದ ನಂದೀಶ್ ಬಂಕೇನಹಳ್ಳಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕಿ ಮೈಮೂನಾಭಿಯವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶಾಲಾ ಅಮೃತ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರಾದ ಸಂಜಯ್ ಗೌಡ, ಹಿರಿಯರಾದ ಟಿ.ಎ.ಖಾದರ್, ಹಸೇನಾ ಹಾಜಿ, ಟಿ.ಸಿ.ರಮೇಶ್, ನಟೇಶ್, ವೀರಪ್ಪಆಲೇಕಾಡು, ನಂದೀಶ್ ಬಂಕೇನಹಳ್ಳಿ, ಟಿ.ಜಿ.ಪ್ರಶಾಂತ್, ಎ.ಎಂ.ಮಹೇಶ್, ಟಿ.ಎಂ.ನರೇಂದ್ರ, ವಿರೂಪಾಕ್ಷ, ದೇವಣ್ಣ ಚಕ್ಕೋಡು, ಪಿ.ಕೆ.ಸುಬ್ರಾಯ ಕಾರಂತ, ಪ್ರಭಾರಿ ಮುಖ್ಯ ಶಿಕ್ಷಕಿ ಕೆ.ಕವಿತ,ಸಹಶಿಕ್ಷಕರಾದ ಕೆ.ಪಿ.ಹಂಸಲೇಖ,ಪಿ.ವಿ.ಶೀಲಾ,ಕೆ.ಸಿ.ಶ್ವೇತಾ,ನಿವೃತ್ತ,ಶಿಕ್ಷಕಿ ಮೈಮೂನಾಭಿ ಮತ್ತಿತರರು ಇದ್ದರು.
ವರದಿ : ಅನಿಲ್ ಮೋಂತೇರೊ



