ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಈ ಮೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ ಇದಕ್ಕೆ ಶಾಶ್ವತ ಪರಿಹಾರ ರೂಪಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲು ಶಿಫಾರಸು ಮಾಡಬೇಕು ಎಂದು ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅವರು ದೆಹಲಿಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕಳೆದ 25 ವರ್ಷದಿಂದ ಕಾಡಾನೆ ಹಾವಳಿ ಮಿತಿಮೀರಿದೆ. 3 ಜಿಲ್ಲೆಯಲ್ಲಿ 100 ಕ್ಕಿಂತ ಹೆಚ್ಚು ಮಂದಿ ರೈತರು ಕೂಲಿ ಕಾರ್ಮಿಕರು ಮತ್ತು ಗ್ರಾಮಸ್ಥರನ್ನು ಕಾಡಾನೆ ಕೊಂದು ಹಾಕಿದೆ. ನೂರಾರು ಮಂದಿಯನ್ನು ತುಳಿದು ಶಾಶ್ವತವಾಗಿ ಅಂಗವಿಕಲರನ್ನಾಗಿ ಮಾಡಿದೆ. ಕಾಫಿ ತೋಟ, ಬತ್ತದಗದ್ದೆ, ಇನ್ನಿತರೆ ಬೆಳೆಯನ್ನು ನಿರಂತರವಾಗಿ ದ್ವಂಸಗೊಳಿಸುತ್ತಿದೆ. ಜನವಸತಿ ಪ್ರದೇಶದತ್ತ ಕಾಡಾನೆ ಗುಂಪುಗಳು ನಿರಂತರವಾಗಿ ಲಗ್ಗೆಯಿಟ್ಟು ವಾಸದಮನೆ, ಜಾನುವಾರು ಕೊಟ್ಟಿಗೆ, ವಾಹನ, ಮನೆ ಆವರಣದಲ್ಲಿ ಇಟ್ಟಿರುವ ಡ್ರಮ್, ಸಿಂಟೆಕ್ಸ್, ನೀರಿನ ಪೈಪ್, ಪಂಪ್ ಸೆಟ್, ಕಾಂಪೌಂಡ್ ಎಲ್ಲವನ್ನು ಆಗಾಗ ದ್ವಂಸಗೊಳಿಸುತ್ತಿದೆ. ಕಾಡಾನೆ ಹಾವಳಿಯಿಂದ ರೈತರು ಜಮೀನಿಗೆ ಹೋಗುವಂತಿಲ್ಲ. ವಿಧಿಯಿಲ್ಲದೆ ರೈತರು ತಮ್ಮ ಜಮೀನುಗಳನ್ನು ಪಾಳು ಬಿಡುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕಾಡಾನೆ ಹಾವಳಿಗೆ ಶಾಶ್ವತ ಕಲ್ಪಿಸಲು ಮಲೆನಾಡು ಭಾಗದಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತದೆ. ಜನರನ್ನು ಬಲಿ ಪಡೆದಾಗ ರೊಚ್ಚಿಗೆದ್ದ ಸಾರ್ವಜನಿಕರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಜೈಲು ಸೇರಿದ್ದಾರೆ. ಹಲವೆಡೆ ಲಾಟಿ ಪ್ರಹಾರವಾಗಿದೆ. ಕಾಡಾನೆಯಿಂದ ಬಲಿಯಾದವರ ಕುಟುಂಬದವರ ಆಕ್ರೋಶ ಮುಗಿಲು ಮುಟ್ಟಿದಾಗ ಕೆಲ ಶಾಸಕರ ಮೇಲೆ ಹಲ್ಲೆ ಕೂಡ ನಡೆದಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಿಸಲು ಹೊಸ ಯೋಜನೆ ರೂಪಿಸಬೇಕು. ಕೇಂದ್ರ ಸರ್ಕಾರ ತಯಾರಿ ನಡೆಸಬೇಕು ಎಂದು ಎಚ್.ಎಂ.ವಿಶ್ವನಾಥ್ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.




