ಮೂಡಿಗೆರೆ ತಾಲ್ಲೂಕಿನ ಕಸ್ಕೇಬೈಲ್, ಕಲ್ಲುಗುಡ್ಡ ಗ್ರಾಮದಲ್ಲಿ ಕಳೆದ ಒಂದುವರೆ ತಿಂಗಳಿನಿಂದ 28 ಕಾಡಾನೆಗಳು ತಿರುಗಾಡುತ್ತಿದೆ. ಜನವಸತಿ ಪ್ರದೇಶದತ್ತ ನಿರಂತರವಾಗಿ ಲಗ್ಗೆಯಿಡುತ್ತಿದೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ. ಆದರೆ ಅರಣ್ಯ ಇಲಾಖೆಯಿಂದ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಲ್ಲುಗುಡ್ಡ ಗ್ರಾಮದ ನಿವಾಸಿ, ವಕೀಲ ಕೆ.ಸಿ.ಚಂದ್ರಶೇಖರ್ ದೂರಿದರು.
ಭುವನೇಶ್ವರಿ ಮತ್ತು ಬೀಟಮ್ಮ ಈ 2 ಗುಂಪಿನ 42 ಕಾಡಾನೆಗಳು ಒಂದುವರೆ ತಿಂಗಳ ಹಿಂದೆ ಬೇಲೂರಿನ ಕಾನಹಳ್ಳಿ ಮೀಸಲು ಅರಣ್ಯದಿಂದ ಜಿ.ಹೊಸಳ್ಳಿ ಗ್ರಾಮದ ಮೂಲಕ ಮೂಡಿಗೆರೆ ತಾಲೂಕಿಗೆ ಪ್ರವೇಶಿಸಿ ಜಿ.ಹೊಸಳ್ಳಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದವು. ಆ ಗುಂಪಿನ ಕಾಡಾನೆಗಳು ಚದುರಿ 28 ಕಾಡಾನೆಗಳು ಕಲ್ಲುಗುಡ್ಡ, ಕಸ್ಕೇಬೈಲ್ ಗ್ರಾಮದತ್ತ ಬಂದಿದೆ. ಅದರಲ್ಲಿ 5 ಕಾಡಾನೆಗಳು ಬೇರ್ಪಟ್ಟಿವೆ. ಈಗ 23 ಕಾಡಾನೆ ಕಲ್ಲುಗುಡ್ಡ ಗ್ರಾಮದ ಜನವಸತಿ ಪ್ರದೇಶದಲ್ಲಿ ಬೀಡು ಬಿಟ್ಟಿದೆ. ಗ್ರಾಮದಲ್ಲಿ ಜನ ನೆಮ್ಮದಿ ಕಳೆದುಕೊಂಡಿದ್ದಾರೆ. ಮನೆಯ ಬಾಗಿಲು ತೆರೆದು ಹೊರ ಬಂದೊಡನೆ ಕಾಡಾನೆಗಳ ದರ್ಶನವಾಗುತ್ತದೆ. ಭಯದಿಂದ ಮನೆಯೊಳಗೆ ಓಡಿ ಬಾಗಿಲು ಮುಚ್ಚಿ ಒಳಗೆ ಅವಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಕಲ್ಲುಗುಡ್ಡ ಗ್ರಾಮದಲ್ಲಿ ಗುಂಪಾಗಿ ಮನೆಗಳಿವೆ. ಕಸ್ಕೇಬೈಲ್ ಗ್ರಾಮದ ಅಲ್ಲಲ್ಲಿ ಒಂದೊಂದೆ ಮನೆಗಳಿವೆ. ಕಳೆದವಾರ ಚಿತ್ರನಟ ಗುರುನಂದನ್ ಅವರ ಕಸ್ಕೇಬೈಲ್ ಗ್ರಾಮದಲ್ಲಿರುವ ಮನೆ ಆವರಣಕ್ಕೆ ಕಾಡಾನೆಗಳು ಗುಂಪುಗೂಡಿ ಲಗ್ಗೆಯಿಟ್ಟು ಈಜುಕೊಳದಲ್ಲಿ ನೀರು ಕುಡಿದು ಕಾಫಿ ಗಿಡಗಳನ್ನು ಧ್ವಂಸಗೊಳಿಸಿ ಹೋಗಿದೆ. ಅಲ್ಲಿಂದ ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟಿ ಕಲ್ಲುಗುಡ್ಡ ಗ್ರಾಮಕ್ಕೆ ಬಂದು ಇನ್ನೊಂದು ಗುಂಪನ್ನು ಸೇರಿಕೊಂಡಿದೆ. ಈಗ ಗ್ರಾಮದಲ್ಲಿ ಎತ್ತ ನೋಡಿದರು ಕಾಡಾನೆ ಕಾಣಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಕಾಡಾನೆ ಗುಂಪುಗಳು ಅಲ್ಲಲ್ಲಿ ಇರುವ ಬಗ್ಗೆ ಅರಣ್ಯ ಇಲಾಖೆಯ ಟಾಸ್ಕ್ ಪೋರ್ಸ್ ತಂಡದವರು ವಾಟ್ಸಾಪ್ ಗ್ರೂಪ್ ನಲ್ಲಿ ಮಾಹಿತಿ ರವಾನಿಸಿ ಗ್ರಾಮಸ್ಥರು ಜಾಗರೂಕತೆಯಿಂದ ಇರಲು ಮತ್ತು ಅತ್ತಿತ್ತ ಓಡಾಡದಂತೆ, ಜಮೀನಿನ ಕೆಲಸಕ್ಕೆ ಹೋಗದಂತೆ ಪ್ರತಿ ಅರ್ಧ ಗಂಟೆಗೊಮ್ಮೆ ಎಚ್ಚರಿಕೆ ನೀಡುತ್ತಾರೆ. ಆದರೆ ಕಾಡಾನೆಗಳ ಗುಂಪನ್ನು ಅರಣ್ಯದತ್ತ ಓಡಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಕಾಡಾನೆ ಟಾಸ್ಕ್ ಪೋರ್ಸ್ ತಂಡದ ಬಳಿ ಕಾಡಾನೆಗಳನ್ನು ಅಟ್ಟಲು ಯಾವುದೆ ಆಯುಧಗಳಿಲ್ಲ. ಕಾಟಾಚಾರಕ್ಕೆಂಬಂತೆ ಟಾಸ್ಕ್ ಪೋರ್ಸ್ ತಂಡವನ್ನು ರಚಿಸಿ ಕಾಡಾನೆ ಗುಂಪು ಇರುವ ಕಡೆ ಜಾಗೃತಿ ವಹಿಸಿ ಜನವಸತಿ ಪ್ರದೇಶಗಳತ್ತ ಕಾಡಾನೆಗಳು ಬರದಂತೆ ತಡೆಗಟ್ಟುವಂತೆ ಅರಣ್ಯ ಇಲಾಖೆಯಿಂದ ಟಾಸ್ಕ್ ಪೋರ್ಸ್ ತಂಡಕ್ಕೆ ಅಧಿಕಾರಿಗಳು ಸೂಚಿಸಿದ್ದಾರೆ. ಟಾಸ್ಕ್ ಪೋರ್ಸ್ ತಂಡ ಸ್ಥಳಕ್ಕೆ ಬಂದರೆ ಪ್ರಯೋಜನವಿಲ್ಲ. ಕಾಡಾನೆಗಳನ್ನು ಅರಣ್ಯದತ್ತ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈಗ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ನಮ್ಮ ಜಿಲ್ಲೆಯ ಐವರು ಶಾಸಕರು, ನಾಲ್ವರು ವಿಧಾನ ಪರಿಷತ್ ಸದಸ್ಯರು ಇದ್ದರೂ ಪ್ರಯೋಜನವಿಲ್ಲ. ಸದನದಲ್ಲಿ ಕಾಡಾನೆ ಹಾವಳಿ ಬಗ್ಗೆ ಇದುವರೆಗೂ ಸರ್ಕಾರದ ಗಮನ ಸೆಳೆಯಲಿಲ್ಲ. ಕಾಡಾನೆ ಹಾವಳಿ ತಡೆಗಟ್ಟಲು ಸರ್ಕಾರ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.



