ಕಾಫಿನಾಡ ಚಿಕ್ಕಮಗಳೂರಿನಲ್ಲಿ ಆಧ್ಯಾತ್ಮಿಕತೆಗೆ ಹೆಸರಾಗಿರುವ ದೇವಾಲಯಗಳ ಪಾವಿತ್ರ್ಯತೆ ಇದೀಗ ಗಂಭೀರವಾಗಿ ಹಾನಿಗೊಳಗಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇವಾಲಯದ ಬಳಿಕ, ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರ ದೇವಾಲಯದ ಆವರಣವು ಅಸಭ್ಯ ಚಟುವಟಿಕೆಗಳಿಂದ ಮಲೀನವಾಗುತ್ತಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ದೇವಾಲಯದ ಸುತ್ತಮುತ್ತ ಮದ್ಯಪಾನ, ಸಿಗರೇಟ್ ಧೂಮಪಾನ ಮತ್ತು ಅಸಭ್ಯ ವರ್ತನೆಗಳು ಹೆಚ್ಚಾಗುತ್ತಿವೆ. ಕೆಲ ಪ್ರವಾಸಿಗರು ಪವಿತ್ರ ಸ್ಥಳವನ್ನೇ ಮನರಂಜನೆಗಾಗಿ ಬಳಸುತ್ತಿರುವುದು ಸ್ಥಳೀಯರಲ್ಲಿ ತೀವ್ರ ಅಸಮಾಧಾನ ಹುಟ್ಟಿಸಿದೆ. ದೇವಸ್ಥಾನದ ಆವರಣದಲ್ಲಿ ಸಿಗರೇಟ್ ಸೇದುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆದಿದೆ.
ಇನ್ನೂ ಆತಂಕಕಾರಿ ಸಂಗತಿಯೇನೆಂದರೆ, ದೇವಾಲಯದ ಸುತ್ತ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಎಲ್ಲ ಬೆಳವಣಿಗೆಗಳಿಗೆ ಅರಣ್ಯ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣವೆಂದು ಭಕ್ತರು ಕಿಡಿಕಾರಿದ್ದಾರೆ.
ತಕ್ಷಣವೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು, ಭದ್ರತೆ ಹೆಚ್ಚಿಸಬೇಕು ಮತ್ತು ಅಸಭ್ಯ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.



