ಅಪರೂಪದ ಪುನಗನ ಬೆಕ್ಕು ಬೇಟೆಯಾಡಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅರಣ್ಯ ಇಲಾಖೆ ಪ್ರಕರಣದ ಬಗ್ಗೆ ಈ ಕೆಳಕಂಡಂತೆ ಮಾಹಿತಿ ನೀಡಿದೆ
ದಿನಾಂಕ:22-04-2026ರಂದು ಮೂಡಿಗೆರೆ ತಾಲ್ಲೂಕು ಗೋಣಿಬೀಡು ಶಾಖೆ, ಉಪ ವಲಯ ಅರಣ್ಯಾಧಿಕಾರಿಯವರಿಗೆ ಬಂದ ಮಾಹಿತಿ ಏನೆಂದರೆ, ಕಾಡುಪ್ರಾಣಿಯ ಕಳ್ಳಬೇಟೆಯಾಡಿ ಬೊಲೆರೋ ಪಿಕ್ ಅಪ್ ವಾಹನದಲ್ಲಿ ತುಂಬಿಕೊಂಡು ಜನ್ನಾಪುರದಿಂದ ಮೂಡಿಗೆರೆ ಕಡೆಗೆ ಬರುತ್ತಿದ್ದಾರೆಂಬ ಖಚಿತ ವರ್ತಮಾನದ ಮೇರೆಗೆ, ಶಾಖೆಯ ಸಿಬ್ಬಂದಿಗಳೊಂದಿಗೆ ಮೂಡಿಗೆರೆ ವಲಯದ ಮೂಡಿಗೆರೆ-ಬೇಲೂರು ಮುಖ್ಯ ರಸ್ತೆ ಹಾಲೂರು, ಜೋಗಣ್ಣನಕೆರೆ ಬಸ್ ಸ್ಟಾಂಡ್ ಹತ್ತಿರ ಕಾಯುತ್ತಿರುವಾಗ ಬಂದಂತಹ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಆ ಸಮಯದಲ್ಲಿ ಬಿಳಿಬಣ್ಣದ ಪಿಕ್ ಅಪ್ ವಾಹನವನ್ನು ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚಿಸಿದಾಗ, ವಾಹನವನ್ನು ನಿಲ್ಲಿಸದೇ ವೇಗವಾಗಿ ಮುಂದೆ ಸಾಗಿದ್ದು, ಬೆನ್ನಟ್ಟಲಾಗಿ ಸ್ವಲ್ಪ ದೂರದಲ್ಲಿ ವಾಹನವನ್ನು ರಸ್ತೆಪಕ್ಕಕ್ಕೆ ನಿಲ್ಲಿಸಿದ್ದು, ವಾಹನದಲ್ಲಿದ್ದ 04 ಜನ ಆಸಾಮಿಗಳ ಪೈಕಿ ಎರಡು ಜನ ಅಸಾಮಿಗಳನ್ನು (Al ಎಂ.ಜೆ.ನಂದನ್ ಅಬಚೂರು, A2 ಹೆಚ್.ಜಿ.ಆದರ್ಶ ಹಾಲೂರು) ಹಿಡಿದು ಬಂಧಿಸಿದ್ದು, ಇನ್ನುಳಿದ ಇಬ್ಬರು ( A3 ಪ್ರೀತಮ್ ಹಳೇ ಮೂಡಿಗೆರೆ, A4 ಚಿದಾನಂದ ಹಾಲೂರು) ಆಸಾಮಿಗಳು ಓಡಿ ತಲೆಮರೆಸಿಕೊಂಡಿರುತ್ತಾರೆ.
ನಂತರ ವಾಹನವನ್ನು ಪರಿಶೀಲಿಸಲಾಗಿ, ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ ವಾಹನ ನೊಂದಣಿ ಸಂಖ್ಯೆ:KA-46-6330 ಆಗಿದ್ದು, ವಾಹನಕ್ಕೆ ಮುಚ್ಚಿದ್ದ ಪ್ಲಾಸ್ಟಿಕ್ ಟಾರ್ ಪಾಲ್‌ನ್ನು ತೆಗೆದ ತಪಾಸಣೆ ಮಾಡಲಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸತ್ತ 03 ಪುನುಗುಬೆಕ್ಕುಗಳು ಕಂಡುಬಂದಿರುತ್ತದೆ,
ವನ್ಯಪ್ರಾಣಿಯನ್ನು ಕಳ್ಳಬೇಟೆಯಾಗಿ ವಾಹನದಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದುದು ವನ್ಯಜೀವಿ ಅರಣ್ಯ ಕಾಯ್ದೆ, ಕಾನೂನುಗಳಿಗೆ ವಿರುದ್ಧವಾಗಿರುವುದರಿಂದ ವಾಹನದಲ್ಲಿ 02 ಜನ ಆಸಾಮಿಗಳನ್ನು ಬಂಧಿಸಿದ್ದು, ಇನ್ನುಳಿದ 04 ಜನ ಆಸಾಮಿಗಳು ತಲೆಮರೆಸಿಕೊಂಡಿರುತ್ತಾರೆ.
ವಾಹನದಲ್ಲಿದ್ದ 03 ಪುನುಗುಬೆಕ್ಕುಗಳ ಮೃತ ದೇಹವನ್ನು, ಕೃತ್ಯಕ್ಕೆ ಬಳಸಿರುವ 02 ಒಂಟಿನಳಿಕೆ ಬಂದೂಕುಗಳನ್ನು, ಉಪಯೋಗಿಸದ 04 ತೋಟಗಳನ್ನು, 01 ಟಾರ್ಚ್, ಆರೋಪಿಗಳ ಮೊಬೈಲ್ 02 ಸಂಖ್ಯೆ ಮತ್ತು ಕಳ್ಳಸಾಗಾಣಿಕೆಗೆ ಬಳಸಿರುವ ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ ವಾಹನ ನೊಂದಣಿ ಸಂಖ್ಯೆ:KA-46-6330ನ್ನು ಇಲಾಖಾ ವಶಕ್ಕೆ ಪಡೆದು, ಈ ಮೇಲ್ಕಂಡ Al, A2 ಆಸಾಮಿಗಳನ್ನು ಬಂಧಿಸಲಾಗಿರುತ್ತದೆ. ಇನ್ನುಳಿದ ಆಸಾಮಿಗಳು ತಲೆಮರೆಸಿಕೊಂಡಿರುತ್ತಾರೆ.
ಸದರಿ ಕೃತ್ಯಕ್ಕೆ ಮರ್ಲೆ ನಿವಾಸಿಯಾದ ಕೃಷ್ಣಪ್ಪ ಬಿನ್ ನಾಗರಾಜು ಇವರು ಸಹಕರಿಸಿರುತ್ತಾರೆ ಎಂದು ಬಂಧಿಸಿರುವ ಆಸಾಮಿಗಳು ತಿಳಿಸಿರುತ್ತಾರೆ. ಹಾಗೂ ಬಂದೂಕು ಪರವಾನಗಿ ಹೊಂದಿರುವ ಒಂಟಿ ನಳಿಕೆ ಬಂದೂಕನ್ನು ಸದರಿ ಕೃತ್ಯಕ್ಕೆ ಉಪಯೋಗಿಸಲು ಕರುಣಾಕರಮೂರ್ತಿ ಇವರು ನೀಡಿ ಸಹಕರಿಸಿರುತ್ತಾರೆ ಎಂದು ಬಂಧಿಸಿರುವ ಆಸಾಮಿಗಳು ತಿಳಿಸಿರುತ್ತಾರೆ.
ಮೇಲ್ಕಂಡ ಬಂಧಿಸಿರುವ Al, A2 ಆಸಾಮಿಗಳನ್ನು ಸದರಿ ಪುನುಗುಬೆಕ್ಕುಗಳನ್ನು ತಂದ ಸ್ಥಳದ ಬಗ್ಗೆ ವಿಚಾರಿಸಲಾಗಿ, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ತಾಲ್ಲೂಕಿನ ಕಳಸಾಪುರ ಮತ್ತು ಮರ್ಲೆ ಗ್ರಾಮದ ಸುತ್ತಮುತ್ತ ಇರುವ ಅರಣ್ಯ ಪ್ರದೇಶದಲ್ಲಿ ರಾತ್ರಿವೇಳೆಯಲ್ಲಿ ಸರ್ಚ್ ಲೈಟ್ ಉಪಯೋಗಿಸಿ ಬೇಟೆಯಾಡಿರುವುದಾಗಿ, ಬೇಟೆಯಾಡಿದ ಪುನುಗುಬೆಕ್ಕುಗಳನ್ನು ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ ವಾಹನ ನೊಂದಣಿ ಸಂಖ್ಯೆ: KA-46-6330ರಲ್ಲಿ ತುಂಬಿಸಿ, ನಂತರ ಮಾಂಸ ತಯಾರಿಸಿ ಉಪಯೋಗಿಸಿಕೊಳ್ಳುವುದಾಗಿ ತಿಳಿಸಿರುತ್ತಾರೆ.
ಕೃತ್ಯವು ವನ್ಯಜೀವಿ ಸಂರಕ್ಷಣಾ ಕಾಯ್ದೆ, ಕಾನೂನುಗಳಿಗೆ ವಿರುದ್ಧವಾಗಿರುವುದರಿಂದ ಆರೋಪಿಗಳ ವಿರುದ್ಧ WLOR/No.03/2026-27, ದಿನಾಂಕ:22-04-2026ನ್ನು ದಾಖಲು ಮಾಡಲಾಗಿದ್ದು, ಪ್ರಕರಣದ ತನಿಖೆಯು ಪ್ರಗತಿಯಲ್ಲಿರುತ್ತದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ರಮೇಶ್ ಬಾಬು ಎನ್. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಚಿಕ್ಕಮಗಳೂರು ವಿಭಾಗ, ಚಿಕ್ಕಮಗಳೂರು, ಆಕರ್ಷ್ ಟಿ.ಎಮ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮೂಡಿಗೆರೆ ಉಪವಿಭಾಗ, ಮೂಡಿಗೆರೆ ಗಳವರ ಮಾರ್ಗದರ್ಶನದಲ್ಲಿ
ಕಾರ್ಯಾಚರಣೆಯ ನೇತೃತ್ವವನ್ನು ಮಂಜುನಾಥ ಜಿ. ವಲಯ ಅರಣ್ಯಾಧಿಕಾರಿಗಳು, ಮೂಡಿಗೆರೆ ವಲಯ, ಮೂಡಿಗೆರೆ ಮತ್ತು ಉಪ ವಲಯ ಅರಣ್ಯಾಧಿಕಾರಿ, ರವಿರಾಜ್, ಗೋಣಿಬೀಡು ಶಾಖೆ, ಗಸ್ತು ಅರಣ್ಯ ಪಾಲಕರಾದ ಪರಮೇಶ್, ಎ.ವಿ.ಶಿವರಾಜ್, ವಿ.ಎಸ್.ಆದರ್ಶ್, ವಾಚರ್ ಆದ ಉದಯ್ ಬಿ.ಕೆ. ವಾಹನ ಚಾಲಕ ನವರಾಜ್ ಭಾಗವಹಿಸಿದ್ದರು.



