ಬೆಂಗಳೂರಿನಲ್ಲಿ ಬುಧವಾರ ಸಂಜೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದ್ದು, ಶಿವಾಜಿನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಕಾಂಪೌಂಡ್ ಗೆ ಹೊಂದಿಕೊಂಡಂತೆ ವ್ಯಾಪಾರ ಮಾಡುತ್ತಿದ್ದವರು ಸೇರಿ ಹಲವರು ಮೃತಪಟ್ಟಿದ್ದು, ಗಾಯಗೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಮೆಜೆಸ್ಟಿಕ್, ಶಾಂತಿನಗರ, ಕೋರಮಂಗಲ, ವಿಧಾನಸೌಧ, ಶಿವಾಜಿನಗರ, ಚಾಮರಾಜಪೇಟೆ ಸೇರಿದಂತೆ ನಗರದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದೆ.
ಮೃತರನ್ನು ಕರ್ನಾಟಕದ ಮೊಹಮ್ಮದ್ ಅಬ್ದುಲ್ (52), ಫಯಾಜ್ ಅಹ್ಮದ್(39), ಮುಸಾವೀರ್ ಬೇಗಂ(6), ಕೇರಳದ ಮಹಿಳೆಯರಾದ ಲತಾ (57), ಸ್ಮಿತಾ (47), ಉತ್ತರಪ್ರದೇಶದ ಮೊಹಮದ್ ಸಲಾವುದ್ದಿನ್ ಅನ್ಸಾರಿ (36) ಹಾಗೂ ಅಸ್ಸಾಂನ ಯುವಕ ನಸಿಮುಲ್ಲಾ (19) ಎಂದು ಗುರುತಿಸಲಾಗಿದೆ. ಅಲ್ಲದೆ, ಘಟನೆಯಲ್ಲಿ ಕೇರಳ ಮೂಲದ ಪ್ರೀತಿ (51), ಸಿಜಾ (45) ಹಾಗೂ ಮಾಯಾ (51) ಎಂಬ ಮೂವರು ಗಾಯಗೊಂಡಿದ್ದಾರೆ.
ಆಸ್ಪತ್ರೆ ಕಾಂಪೌಂಡ್ ಗೋಡೆಯನ್ನು ಹೊಸತಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಹಳೆಯ ಗೋಡೆಗೆ ಹೊಂದಿಕೊಂಡಂತೆ ದೊಡ್ಡ ಟಾರ್ಪಲ್ ಹಾಕಿ ಕೆಲವರು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದರು. ಸಂಜೆ ವೇಳೆ ಆರಂಭವಾದ ಮಳೆಗೆ ನೆನೆದ ಹಳೆಯ ಗೋಡೆ ಏಕಾಏಕಿ ಕುಸಿದಿದೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ಮಾಹಿತಿ ಪಡೆದಿರುವ ಅವರು ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ವಿಲ್ಸನ್ ಗಾರ್ಡನ್‌ನ ಹೆರಿಗೆ ಆಸ್ಪತ್ರೆ ಆವರಣಕ್ಕೆ ಮಳೆ ನೀರು ನುಗ್ಗಿದೆ. ಪರಿಣಾಮ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿದ್ದು ವಾಹನ ಹೊರತೆಗೆಯಲು ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ ಮಲ್ಲೇಶ್ವರಂನಲ್ಲಿ ರಸ್ತೆ ಮೇಲೆ ಮರ ಉರುಳಿದ ಪರಿಣಾಮ ವಾಹನಗಳು ಜಖಂಗೊಂಡ ಘಟನೆ ವರದಿಯಾಗಿದೆ. ಮಳೆಯ ಅಬ್ಬರ ಮುಂದುವರೆದಿದ್ದು, ಸಿಲಿಕಾನ್ ಸಿಟಿಯ ಜನರನ್ನ ಹೈರಾಣಾಗುವಂತೆ ಮಾಡಿದೆ.
ಹವಾಮಾನ ಇಲಾಖೆಯು ಏಪ್ರಿಲ್ 29 ಮತ್ತು 30 ರಂದು ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧೆಡೆ ಮಳೆಯಾಗುವುದಾಗಿ ಸೂಚನೆ ನೀಡಿತ್ತು. ಜೊತೆ ಆರೆಂಟ್ ಅಲರ್ಟ್ ಸಹ ಮಾಡಿತ್ತು.



