ಚಿಕ್ಕಮಗಳೂರು-ಲೈಫ್ ಲೈನ್ ಫೀಡ್ಸ್ ಮತ್ತು ಟೆಂಡರ್ ಚಿಕನ್ ವ್ಯಾಪಾರ ಉದ್ದಿಮೆಯನ್ನು ಆರಂಭಿಸಿದ ದಿನದಿಂದ ಆರಂಭಶೂರತ್ವ ತೋರದೆ ನಿರಂತರವಾಗಿ ಉದ್ದಿಮೆಯನ್ನು ನೆಡೆಸಿಕೊಂಡು ಬರುತ್ತಿದ್ದಾರೆ, ಕಿಶೋರ್ ಕುಮಾರ್ ಹೆಗ್ಡೆಯವರು ಯಶಸ್ವಿ ಉದ್ದಿಮೆದಾರರಾಗಿದ್ದು, ಸಾಮಾಜಿಕ ಕಾರ್ಯಗಳಿಗೂ ಅವರು ನೀಡುತ್ತಿರುವ ಕೊಡುಗೆ ಮಾದರಿಯಾದುದು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಗುರುವಾರ ಎಐಟಿ ವೃತ್ತದಲ್ಲಿ ಲೈಫ್ ಲೈನ್ ಫೀಡ್ಸ್ ಸಮೂಹ-ಸಂಸ್ಥೆಗಳಿಂದ ಆರಂಭಿಸಲಾದ 49ನೇ ಟೆಂಡರ್ ಚಿಕನ್ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಕುಂದಾಪುರದಿಂದ ಚಿಕ್ಕಮಗಳೂರಿಗೆ ಬಂದು ಜಿಲ್ಲೆ, ರಾಜ್ಯ, ಭಾರತ ದೇಶ ಸೇರಿದಂತೆ ಹತ್ತಾರು ದೇಶಗಳಲ್ಲಿ ಲೈಫ್ ಲೈನ್ ಟೆಂಡರ್ ಚಿಕನ್ ಮಾರಾಟ ಮಳಿಗೆಗಳನ್ನು ತೆರೆದು ಕಿಶೋರ್ ಕುಮಾರ್ ಹೆಗ್ಗಡೆ ಯಶಸ್ವಿ ಉದ್ಯಮಿಯಾಗಿದ್ದಾರೆ ಎಂದು ಶ್ಲಾಘಿಸಿದರು.
2026ನೇ ವರ್ಷ ಹೆಗ್ಗಡೆಯವರಿಗೆ ಬಹಳ ಸಂತೋಷದ ವರ್ಷವಾಗಿದೆ ಎಂದ ಅವರು ಈ ವರ್ಷದಲ್ಲಿ ಮಗನ ಮದುವೆಯನ್ನು ಮಾಡಿದ್ದಾರೆ, ಈ ವರೆಗೆ 1 ಸಾವಿರ ಕೋಟಿ ರೂ ವಹಿವಾಟು ವ್ಯವಹಾರ ನೆಡೆಸುವ ಜೊತೆಗೆ ಸಮಾಜ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ ಇಂತಹ ಪ್ರಾಮಾಣಿಕ ವ್ಯಕ್ತಿಯ ವ್ಯವಹಾರದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನೆಡೆಸಿ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಆಗಿದ್ದಾರೆ ಎಂದು ಹೇಳಿದರು.
ಟೆಂಡರ್ ಚಿಕನ್ ಚಿಕ್ಕಮಗಳೂರು ನಗರದಲ್ಲಿ ಉತ್ತಮ ಗುಣಮಟ್ಟದ ಚಿಕನ್ ಮಾರಾಟ ಮಾಡುತ್ತಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಲೈಫ್ ಲೈನ್ ಸಮೂಹ-ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರ ಸಿಬ್ಬಂದಿಗಳನ್ನು ತಮ್ಮ ಕುಟುಂಬದವರಂತೆ ಕಾಣುತ್ತಿದ್ದಾರೆ ಎಂದರು.
ಈ ಬಾರಿಯ ಮುಂಗಾರು ಉತ್ತಮ ಮಳೆಯನ್ನು ದೇವರು ನೀಡಿ ರೈತರ ಉತ್ಪನ್ನಗಳಿಗೆ ಬೆಲೆ ಸಿಗುವಂತೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಲೈಫ್ ಲೈನ್ ಸಂಸ್ಥೆಯ ಮಾಲೀಕರು ಹಾಗೂ ಸಂಸ್ಥಾಪಕರು ಆದ ಕಿಶೋರ್ ಕುಮಾರ್ ಹೆಗ್ಗಡೆ ಮಾತನಾಡಿ ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯ ನೀಡಬೇಕೆಂಬ ಉದ್ದೇಶದೊಂದಿಗೆ ಇಲ್ಲಿ 49ನೇ ಚಿಕನ್ ಮಾರಾಟ ಮಳಿಗೆಯನ್ನು ಆರಂಭಿಸಲಾಗಿದ್ದು ಇದರಿಂದ ಕಲ್ಯಾಣ ನಗರ, ಹೌಸಿಂಗ್ ಬೋರ್ಡ್ ಸೇರಿದಂತೆ ಈ ಭಾಗದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸದ್ಯದಲ್ಲೆ ಮಂಡ್ಯ ನಗರದಲ್ಲಿ ಟೆಂಡರ್ ಚಿಕನ್ 50ನೇ ಮಾರಾಟ ಮಳಿಗೆಯನ್ನು ಆರಂಭಿಸಲು ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಶೀಲಾದಿನೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಕಾಂಗ್ರೆಸ್ ಮುಖಂಡ ಕೆ.ಎಸ್ ಶಾಂತೇಗೌಡ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ನಗರಸಭೆ ಸದಸ್ಯ ಗುರುಮಲ್ಲಪ್ಪ, ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಮಂಜುನಾಥ್ ಜೋಷಿ, ಕಮಲಾಕ್ಷಿ, ವೇಣುಗೋಪಾಲ್ ಉಪಸ್ಥಿತರಿದ್ದರು.



