ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಪಡೆದು ಅಧಿಕಾರದ ಗದ್ದುಗೆ ಏರಿದೆ. ಪಶ್ಚಿಮ ಬಂಗಾಳದ ಬಿಜೆಪಿ ಗೆಲುವಿನಲ್ಲಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಯುವ ನಾಯಕರೋರ್ವರ ಕಾರ್ಯತಂತ್ರವೂ ಒಂದು ಭಾಗವಾಗಿತ್ತು ಎಂಬುದು ವಿಶೇಷ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಅರುಣ್ ಅವರು ಈ ಸಂಘಟನಾತ್ಮಕ ಯಶಸ್ಸಿನ ರೂವಾರಿಯಾಗಿದ್ದಾರೆ. ಅರುಣ್, ಬಂಗಾಳದ ಚುನಾವಣಾ ಕಣದ ನಾರ್ತ್ ಝೋನ್ ಸಿಲಿಗುರಿ ವಿಭಾಗದ ಸಂಘಟನಾ ಪ್ರಭಾರಿಯಾಗಿ ಗೆಲುವಿನ ತಂತ್ರ ಹೆಣೆದಿದ್ದರು.
ಪಕ್ಷ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಿಂಗಳುಗಟ್ಟಲೆ ದೂರದ ಬಂಗಾಳದ ನೆಲದಲ್ಲಿ ಕೆಲಸ ಮಾಡುವ ಮೂಲಕ ಕರ್ನಾಟಕದ ಹುಡುಗನೊಬ್ಬ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಕಳೆದ 6 ತಿಂಗಳಿನಿಂದ ಬಂಗಾಳದ ಗುಡ್ಡಗಾಡು ಪ್ರದೇಶಗಳಲ್ಲಿ ಬೀಡುಬಿಟ್ಟು ಅಲ್ಲೇ ಮನೆ ಮನೆ ಸುತ್ತಿ ಪ್ರಚಾರ ಮಾಡಿದ ತಂಡದ ಉಸ್ತುವಾರಿಯಾಗಿದ್ದ ಅರುಣ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಬಂಗಾಳದ ಕಠಿಣ ರಾಜಕೀಯ ಪರಿಸ್ಥಿತಿ ಮತ್ತು ಅಡೆತಡೆಗಳ ನಡುವೆಯೂ 6 ತಿಂಗಳು ಕಾಲ ತಮ್ಮ ತಂಡದೊಡಗೂಡಿ ತಳಮಟ್ಟದಲ್ಲಿ ಕೆಲಸ ಮಾಡಿದ ಅರುಣ್ ಮನೆ ಮನೆಗೂ ತೆರಳಿ ಪಕ್ಷವನ್ನು ಸಂಘಟಿಸಿದ್ದರು. ಸ್ಥಳೀಯ ಸಮಸ್ಯೆ ಅರಿತು, ಅವುಗಳಿಗೆ ತಕ್ಕಂತೆ ಅರುಣ್ ಗೆಲುವಿನ ಮಂತ್ರ ರೂಪಿಸಿದ್ದರು. ಅದು ಇದೀಗ ಉತ್ತಮ ಫಲಿತಾಂಶದ ರೂಪದಲ್ಲಿ ಪ್ರತಿಫಲಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆಯ ದಾಖಲೆ ಮತಗಳು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ವಿರೋಧ ಪಕ್ಷದ ಪ್ರಬಲ ನಾಯಕರ ವಿರುದ್ಧ ನಡೆಸಿದ ಸಂಘಟನಾತ್ಮಕ ಹೋರಾಟದಲ್ಲಿ ಅರುಣ್ ಪಾತ್ರ ಬಹಳ ದೊಡ್ಡದಿತ್ತು.
ಅರುಣ್ ಅವರು ಬಿನ್ನಡಿ ಗ್ರಾಮದ ಕೃಷಿಕರಾದ ಜಗದೀಶ್ ಗೌಡ ಮತ್ತು ಗಾಯತ್ರಿ ಅವರ ಪುತ್ರ, ದೇಶ ಸೇವೆ ಮಾಡಬೇಕು ಎಂಬ ಅಪೇಕ್ಷೆಯಿಂದ ತಿಂಗಳಿಗೆ 1 ಲಕ್ಷ ರೂ. ಸಂಬಳದ ಟೊಯೋಟೋ ಕಂಪನಿಯ ಸೀನಿಯರ್ ಮ್ಯಾನೇಜರ್ ಕೆಲಸಕ್ಕೆ ರಾಜೀನಾಮೆ ನೀಡಿ ತಾವು ನಂಬಿದ ಸಿದ್ಧಾಂತಕ್ಕೆ ಪೂರಕವಾಗಿ , ರಾಷ್ಟ್ರೀಯ ಸ್ವಯಂ ಸೇವಕಾ ಸಂಘದಲ್ಲಿ ಗುರುತಿಸಿಕೊಂಡು ಮುಂದೆ ಬಿಜೆಪಿಯಲ್ಲಿ ತೊಡಗಿಸಿಕೊಂಡು ಅನೇಕ ಚುನಾವಣೆಗಳಲ್ಲಿ ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಫಲಿತಾಂಶ ಬಂದ ಬಳಿಕ ಸ್ವಗ್ರಾಮಕ್ಕೆ ಆಗಮಿಸಿದ್ದ ಅರುಣ್ ಬಿನ್ನಡಿ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದ್ದಾರೆ.



