ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ರಸಗೊಬ್ಬರ ಬೆಲೆ ಏರಿಕೆ ಮಾಡಿರುವುದರಿಂದ ರೈತರು ಮತ್ತು ಜನ ಸಾಮಾನ್ಯರ ಮೇಲೆ ಹೊರೆಯಾಗಿದೆ. ಕೂಡಲೆ ಬೆಲೆ ಏರಿಕೆ ಕೈಬಿಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ರಘು ಒತ್ತಾಯಿಸಿದರು.
ಇದರಿಂದ ದಿನನಿತ್ಯ ಬಳಕೆ ಮಾಡುವ ಎಣ್ಣೆ, ಅಕ್ಕಿ, ಬೆಳೆಕಾಳು, ಸರಕುಸಾಗಣೆ, ಹಾಗೂ ಬಸ್ ದರ, ಏರಿಕೆಯಾಗುವ ಸಾಧ್ಯತೆ ಇದ್ದು, ಅದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕೈಬಿಡಬೇಕೆಂದು ನಮ್ಮ ಪಕ್ಷ ಒತ್ತಾಯಿಸುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರ ನಡೆಸುತ್ತಿರುವ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅದ್ದರಿಂದ ಸಂಬಂಧ ಪಟ್ಟ ಸಂಪುಟ ಸಚಿವರನ್ನು ವಜಾ ಮಾಡಬೇಕು. ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದ ಪ್ರಧಾನ ಮಂತ್ರಿಗಳು ಪೆಟ್ರೋಲ್, ಡೀಸೆಲ್ ಕಡಿಮೆ ಬಳಕೆ ಮಾಡಿ ಹಾಗೂ ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ ಎಂದು ದೇಶದ ಜನತೆಗೆ ಕರೆನೀಡಿದ್ದು, ಇದರಿಂದ ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಅಧಿಕಾರಕ್ಕೆ ಬಂದು 3 ವರ್ಷ ಪೂರ್ಣಗೊಳ್ಳುತ್ತಿದ್ದರೂ ಸಹ ರಾಜ್ಯದಲ್ಲಿ ಯುವಜನರಿಗೆ ಉದ್ಯೋಗ, ಮಹಿಳೆಯರಿಗೆ ಭದ್ರತೆ, ಆಶ್ರಯ ಮನೆ, ರೈತರಿಗೆ ಸಬ್ಸಿಡಿ ದರದಲ್ಲಿ ಗೊಬ್ಬರ, ರಾಜ್ಯದ ಅಭಿವೃದ್ಧಿ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ನಿವೇಶನ ರಹಿತರು ಇದ್ದರೂ ಸಹ ಜಿಲ್ಲೆಯ 5 ಶಾಸಕರು ನಿವೇಶ ಮತ್ತು ಜಿಲ್ಲೆಯ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಭಾರತ ಕಮ್ಯೂನಿಸ್ಟ್ ಪಕ್ಷವು ಹೊರಾಟವನ್ನು ರೂಪಿಸಲು ನಿರ್ಧರಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಹೆಡದಾಳ್ ಕುಮಾರ್, ಸೋಮೇಗೌಡ , ವಸಂತ್ ಕುಮಾರ್ ಸಿ. ತೇಗೂರ್, ರಮೇಶ್.ಜಿ ಉಪಸ್ಥಿತರಿದ್ದರು.



