ಬಾಳೆಹೊನ್ನೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಡಕಚೇರಿಯನ್ನು ಸಾರ್ವಜನಿಕ ಸೇವೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹತ್ತಾರು ಸಮಸ್ಯೆಗಳನ್ನು ಶಾಸಕ ಟಿ.ಡಿ. ರಾಜೇಗೌಡರ ಮುಂದಿಟ್ಟು, ಬಗೆಹರಿಸಿಕೊಡಬೇಕೆಂದು ಮನವಿ ಮಾಡಿದರು.
ವಾಟುಕೂಡಿಗೆ ಗ್ರಾಮದಲ್ಲಿ ಸುಮಾರು 80 ವರ್ಷಗಳಿಂದ ಸಂಚರಿಸುತ್ತಿದ್ದ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಬಂದ್ ಮಾಡಿ ಸಮಸ್ಯೆ ಉಂಟು ಮಾಡಿದ್ದಾರೆ. ಈ ಬಗ್ಗೆ ನಾಡಕಚೇರಿ ಅಧಿಕಾರಿಗಳಿಗೂ ತಿಳಿಸಿದರು ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಆರೋಪಿಸಿದರು. ಬಿ ಕಣಬೂರು ಗ್ರಾಪಂ ವ್ಯಾಪ್ತಿಯ ಸರ್ವೆ ನಂ. 139 ರಲ್ಲಿ ಪಕ್ಕ ಪೋಡ್ ಆಗದೆ ಸಮಸ್ಯೆ ಉಂಟಾಗಿದೆ. ಸರ್ವೆ ನಂ. 79 ರಲ್ಲಿ ಭೂ ಮಾಪಕರೊಬ್ಬರು ಹಣ ಪಡೆದು ಹೋದವರು ಇದುವರೆಗೂ ಪೋಡ್ ಮಾಡಿಕೊಟ್ಟಿಲ್ಲವೆಂದು ತಮ್ಮ ಅಳಲು ತೋಡಿಕೊಂಡರು.
ನಾಡಕಚೇರಿಯಲ್ಲಿ ಪಹಣಿ ಮತ್ತು ಇತರೆ ದಾಖಲೆಗೆ ಹೆಚ್ಚು ಹಣ ವಸೂಲು ಮಾಡುತ್ತಿದ್ದಾರೆಂದು ಗ್ರಾಮಸ್ಥರೊಬ್ಬರು ದೂರಿದರು. ಮಸೀದಿಕೆರೆಯಲ್ಲಿ 350 ಮುಸ್ಲಿಂ ಕುಟುಂಬಗಳು ವಾಸಿಸುತ್ತಿದ್ದು, ಅಂತ್ಯ ಸಂಸ್ಕಾರ ಮಾಡಲು ಜಾಗವನ್ನು ನೀಡಬೇಕೆಂದು ಶಾಸಕರ ಗಮನಕ್ಕೆ ಅಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಬಂಡಿಮಠದಲ್ಲಿ ಸ್ಥಳಾಂತಗೊಳ್ಳುವ ಕುಟುಂಬಗಳಿಗೆ ಮನೆ ಕಟ್ಟಿಸಿ ಕೊಡಬೇಕು ಹಾಗೂ ಮನೆ ತೆರವು ಮಾಡಿದಲ್ಲಿ ಬಾಡಿಗೆ ಮನೆಗೆ ಹೋಗಲು ಬಾಡಿಗೆಯನ್ನು ಕೊಡಿಸಿಕೊಡಬೇಕಾಗಿ ಒತ್ತಾಯಿಸಿದರು. ಮಾರಿಗುಡಿ ರಸ್ತೆಗೆ ಇತ್ತಿಚೆಗೆ ಕಾಂಕ್ರೀಟ್ ಹಾಕಿದ್ದು ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗೂ ಪೇಟೆಕೆರೆ ರಂಗಮಂದಿರ ಬಳಿ ರಸ್ತೆ ಮಧ್ಯದಲ್ಲಿ ಹೊಂಡವನ್ನು ಬಿಟ್ಟಿದ್ದು, ವೇಗವಾಗಿ ಬಂದವರು ಅಪಘಾತ ಸಂಭವಿಸಬಹುದೆಂದು ಗ್ರಾಮಸ್ಥರು ತಿಳಿಸಿದರು. ಹಾಗೂ ನಿವೇಶನ ರೈತರಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.
ಮಸ್ಥರ ಮನವಿ ಆಲಿಸಿದ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ ವಾಟುಕೂಡಿಗೆ ರಸ್ತೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಹಾಗೂ ಪಕ್ಕ ಪೋಡ್ ಮಾಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಗೆ ಸೂಚಿಸಿದರು.
ಸ್ಮಶಾನ ಭೂಮಿಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕಂದಾಯ ಭೂಮಿ ಇದ್ದಲಿ ಜಾಗ ಕೊಡಿಸುವುದಾಗಿ ಭರವಸೆ ನೀಡಿದರು.
ಭದ್ರ ನದಿಗೆ ನೂತನ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಸೇತುವೆ ಮುಂದಿನಿಂದ ಹಾದು ಹೋಗುವ ಜಾಗದಲ್ಲಿರುವ ಮನೆ ಮಾಲೀಕರಿಗೆ ಹಕ್ಕು ಪತ್ರ ವಿತರಿಸಲಿದ್ದು ಈ ಪೈಕಿ 9 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ ಇನ್ನುಳಿದ 7 ಕುಟುಂಬಗಳಿಗೆ ತಾಂತ್ರಿಕ ದೋಷ ಇರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಬಾಡಿಗೆ ಮನೆಯಲ್ಲಿ ವಾಸಿಸುವುವವರಿಗೆ ಬಾಡಿಗೆ ಹಣ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಮಾರಿಗುಡಿ ರಸ್ತೆ ಕಾಮಗಾರಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು.
ಸರ್ಕಾರಿ ಸ್ವತಂತ್ರ್ಯ ಪ.ಪೂ ಕಾಲೇಜು ಆವರಣದಲ್ಲಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸುವ ಬಗ್ಗೆ ಕಾಲೇಜು ಅಭಿವೃದ್ಧಿ ಮಂಡಳೀ ಸದಸ್ಯರ ಮನವಿಗೆ ಉತ್ತರಿಸಿದ ಅವರು 2022 ರಲ್ಲಿ ತೆರವು ಗೊಳಿಸಿವಂತೆ ಕೊಪ್ಪ ಡಿ ಎಫ್ ಓ ರವರಿಗೆ ಸೂಚಿಸಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.
57 ಗ್ರಾಮದಲ್ಲಿ ಜಂಟಿ ಸರ್ವೆ ಪ್ರಾರಂಭವಾಗಿದ್ದು ಈ ಪೈಕಿ 35 ಗ್ರಾಮಗಳಲ್ಲಿ ಸರ್ವೆ ಕಾರ್ಯ ಮುಗಿದಿದ್ದು, ಫಾರಂ ನಂ.50,53,57 ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕು ಪತ್ರ ನೀಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. 27 ಲಕ್ಷದ 84 ಸಾವಿರ ವೆಚ್ಚದಲ್ಲಿ ನೂತನ ನಾಡ ಕಚೇರಿ ಕಟ್ಟಡವನ್ನು ನಿರ್ಮಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್, ನೂರ್ ಹುದ, ಬ್ಲಾಕ್ ಕಾಂಗೇಸ್ ಅಧ್ಯಕ್ಷ ಜಿ ಎಂ ನಟರಾಜ್, ಹೋಬಳಿ ಅಧ್ಯಕ್ಷ ಮಹಮ್ಮದ್ ಹನೀಫ್, ಕೆಪಿಸಿಸಿ ಸದಸ್ಯ ಮಹಮ್ಮದ್ ಇಫ್ತಿಕರ್ ಆದಿಲ್, ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಹೇಮಲತಾ, ಎಂ ಎಸ್ ಅರುಣೇಶ್, ಹಿರಿಯಣ್ಣ, ಮಹೇಶ್ ಆಚಾರ್, ಹೂವಮ್ಮ, ಮಧುಸೂದನ್, ಎಂ ಎಸ್ ಜಯಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ರವಿಚಂದ್ರ, ಆರ್ ಐ ಮಂಜು ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು. ಸಮೀಕ್ಷ ಪ್ರಾರ್ಥಿಸಿ, ನಿಶ್ಮ ಜೈನ್ ಸ್ವಾಗತಿಸಿ, ನಿರೂಪಿಸಿದರು. ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ ಸಿ ಜಾಯ್ ಪ್ರಾಸ್ತಾವಿಕ ಮಾತನಾಡಿದರು.



