ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪ್ರತಿ ಹಂತದಲ್ಲೂ ಅನ್ಯಾಯದೊಂದಿಗೆ ಅವಮಾನಿಸಿರುವ ಕಾಂಗ್ರೆಸ್‍ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವುದೇ ಒಂದು ಪಕ್ಷ ಅಥವಾ ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳ ಸ್ವತ್ತಲ್ಲ. ಸರ್ವಜನರ ಹಿತ ಒಳಗೊಂಡಿರುವ ಜಗತ್ತಿನಲ್ಲಿಯೇ ಉತ್ಕøಷ್ಟವಾದ ಸಂವಿಧಾನವನ್ನು ಈ ದೇಶಕ್ಕೆ ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಬಾಬಾಸಾಹೇಬರನ್ನು ಗುತ್ತಿಗೆ ಪಡೆದವರಂತೆ ಹೇಳಿಕೆಗಳನ್ನು ಕೊಡುತ್ತಿರುವುದು ಗಮನಿಸಿದಾಗ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬ ಸಂಶಯ ಮೂಡುತ್ತಿದೆ ಎಂದರು.
ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನ ಮಾಡಿದ್ದ ಕಾಂಗ್ರೆಸ್ ಎರಡನೆಯ ಚುನಾವಣೆಯಲ್ಲೂ ಮತ್ತೆ ಸೋಲಿಸಿ ಮತ್ತಷ್ಟು ಅವಮಾನ ಮಾಡಿತ್ತು. ಅಂದು ಅಂಬೇಡ್ಕರ್ ಅವರಿಗೆ ಚುನಾವಣಾ ಏಜೆಂಟ್ ಆಗಿದ್ದವರು ಆರ್‍ಎಸ್‍ಎಸ್ ಪ್ರಚಾರಕ ದತ್ತೋಪಂತ್ ಥೆಂಗಡಿ. ಅಂಬೇಡ್ಕರ್ ಚುನಾವಣೆ ಎದುರಿಸಿದ ಸಂದರ್ಭದಲ್ಲಿ ದೇಶದಲ್ಲಿ ಆರ್‍ಎಸ್‍ಎಸ್ ಮತ್ತು ಜನಸಂಘದ ಪ್ರಭಾವ ಹೆಚ್ಚಿರಲಿಲ್ಲ. ಈಗಿನ ರೀತಿಯಲ್ಲಿ ಪ್ರಭಾವ ಇದ್ದಿದ್ದರೆ ಅಂಬೇಡ್ಕರ್ ಅವರನ್ನು ಸೋಲಿಸಲು ಬಿಡುತ್ತಿರಲಿಲ್ಲ ಎಂದು ತಿಳಿಸಿದರು.
ಅಂಬೇಡ್ಕರ್ ಮರಣ ಹೊಂದಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಜಾಗವನ್ನು ಕೊಡಲಿಲ್ಲ. ಕೊನೆಗೆ ಮುಂಬೈನಲ್ಲಿ ಶವಸಂಸ್ಕಾರ ನೆರವೇರಿಸಲಾಯಿತು. ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಶವ ಸಾಗಿಸಲು ವಿಮಾನದ ವೆಚ್ಚವನ್ನು ಅಂದಿನ ಕಾಂಗ್ರೆಸ್ ಸರ್ಕಾರ ವಸೂಲು ಮಾಡಿತ್ತು. ಈ ರೀತಿ ಪ್ರತಿ ಹಂತದಲ್ಲಿ ಅಂಬೇಡ್ಕರ್ ಅವರಿಗೆ ಉದ್ದೇಶಪೂರಕವಾಗಿಯೇ ಅವಮಾನ, ಅನ್ಯಾಯಗಳನ್ನು ಕಾಂಗ್ರೆಸ್ ಮಾಡಿರುವುದನ್ನು ಜನರು ಮರೆತಿಲ್ಲ ಎಂದರು.
ಜಗತ್ತಿನ ಸರ್ವಶ್ರೇಷ್ಠ ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ, ಸಮಾಜ ಸುಧಾರಕರಾಗಿರುವ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಲ್ಲೂ ಅಂದಿನ ಕಾಂಗ್ರೆಸ್ ಸರ್ಕಾರ ಆಸಕ್ತಿ ತೋರಲೇ ಇಲ್ಲ. 1990 ರಲ್ಲಿ ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಮ್ಮ ಪಕ್ಷದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಈ ರೀತಿ ಅವಮಾನ ಮಾಡಿರುವ ಕಾಂಗ್ರೆಸ್ ಇಂದು ಅಂಬೇಡ್ಕರ್ ಅವರನ್ನು ಗುತ್ತಿಗೆ ಪಡೆದವರಂತೆ ಮಾತನಾಡುತ್ತಿದೆ ಎಂದು ಕುಟುಕಿದರು.
ಕಾಂಗ್ರೆಸ್ ಪೊಳ್ಳು ಭರವಸೆಗಳೊಂದಿಗೆ ಪರಿಶಿಷ್ಟರು, ಪರಿಶಿಷ್ಟ ವರ್ಗದವರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಿತ್ತು. ಈಗ ಎಲ್ಲಿ ತಮ್ಮಿಂದ ಈ ವರ್ಗದ ವೋಟ್ ಬ್ಯಾಂಕ್ ಸ್ಥಾನ ಪಲ್ಲಟವಾಗುತ್ತದೋ ಎಂಬ ಭೀತಿಯಿಂದ ದಲಿತ ಮುಖಂಡರುಗಳಿಂದ ಹೇಳಿಕೆಗಳನ್ನು ಕೊಡಿಸುತ್ತಿರುವುದು ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.
ದಲಿತರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ದೊಡ್ಡ ನಾಟಕ ಮಾಡುತ್ತಿದೆ. ಈ ಪಕ್ಷದ ದೊಡ್ಡ ನಾಯಕರಿಂದ ಹೇಳಿಕೆ ಕೊಡಲಾರದೆ ದಲಿತರಿಂದ ಹೇಳಿಕೆ ಕೊಡಿಸುವ ಮೂಲಕ ನಾಟಕವಾಡುತ್ತಿದೆ. ಅಂಬೇಡ್ಕರ್ ನಮಗೆ ಸ್ವಾಭಿಮಾನ ಸಿದ್ಧಾಂತ ಹೇಳಿಕೊಟ್ಟಿದ್ದಾರೆ. ಯಾವತ್ತೂ ಗಂಜಿ ಕೇಂದ್ರಗಳಾಗುವುದನ್ನು ಹೇಳಿಕೊಟ್ಟಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ಆರ್‍ಎಸ್‍ಎಸ್ ಸದ್ದಿಲ್ಲದೆ ಅಸ್ಪøಶ್ಯತೆ ವಿರುದ್ಧ ಹೋರಾಡುತ್ತಿರುವುದರೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದೆ. ಸಂಘಪರಿವಾರದ ನೆರಳಿನಲ್ಲಿ ಬೆಳೆದಿರುವ ಬಿಜೆಪಿ ನಾಯಕರು ಎಂದೂ ಜಾತಿಯಿಂದ ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಅದಕ್ಕೆ ಸಾಕ್ಷಿ ವಿಧಾನ ಪರಿಷತ್ ಶಾಸಕ ಡಾ.ರವಿ ಸಿ.ಟಿ. ಅವರು ಸೋತಾಗಲೂ, ಗೆದ್ದಾಗಲೂ ಎಲ್ಲಾ ವರ್ಗದ ಜನರನ್ನು ಪ್ರೀತಿಸುತ್ತಾರಲ್ಲದೆ ಅಪ್ಪಿಕೊಳ್ಳುತ್ತಾರೆ ಎಂದರು.
ರವಿಯವರು ಅಂಬೇಡ್ಕರ್ ಜಯಂತಿಯನ್ನು ಹೊಸದಾಗಿ ಮಾಡುತ್ತಿಲ್ಲ. ಅಂಬೇಡ್ಕರ್ ಅವರ 125ನೆಯ ಜಯಂತಿ ಸಂದರ್ಭದಲ್ಲಿ ತನ್ನ ಮನೆ ಮತ್ತು ಇತರೆ 125 ಮನೆಗಳಲ್ಲಿ ಜಯಂತಿ ಆಚರಿಸಲಾಗಿದೆ. ಪ್ರತಿ ವರ್ಷ ಜಯಂತಿ ಆಚರಿಸಿಕೊಂಡು ಬರುತ್ತಿರುವುದನ್ನು ಸಹಿಸಿಕೊಳ್ಳಲಾರದ ಕಾಂಗ್ರೆಸ್ ದಲಿತರನ್ನು ಎತ್ತಿಕಟ್ಟಿ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.
ಸಹ ಪಂಕ್ತಿ ಬೋಜನ, ಅಂಬೇಡ್ಕರ್ ಜಯಂತಿ ಮೂಲಕ ಜಾತಿ ರಹಿತ ಸಮಾಜ ಕಟ್ಟುವ ಪ್ರಾಮಾಣಿಕ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಜಿಲ್ಲೆಯಾದ್ಯಂತ ಎಲ್ಲಾ ಜಾತಿ ಧರ್ಮದವರನ್ನು ಜೋಡಿಸಿಕೊಂಡು ಅಂಬೇಡ್ಕರ್ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಎಲ್ಲಾ ವಿಚಾರಗಳನ್ನು ವಿಶಾಲ ಮನಸ್ಸಿನಿಂದ ನೋಡದ ಕಾಂಗ್ರೆಸ್, ದ್ದೇಷ ಮತ್ತು ಅಸೂಯೆ ರಾಜಕಾರಣದಿಂದ ಸಿ.ಟಿ.ರವಿ ವಿರುದ್ಧ ಹೇಳಿಕೆ ನೀಡುತ್ತಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ಎಲ್.ಲಕ್ಷ್ಮಣನಾಯಕ್, ಮುಖಂಡರಾದ ಡಾ.ಶಿವುಪ್ರಸಾದ್, ಹೊನ್ನಬೋವಿ, ನವೀನ್ ಕುಮಾರ್ ಉಪಸ್ಥಿತರಿದ್ದರು.



