ಜಿಂಕೆ ಜಾತಿಯ ಅಪರೂಪದ ವನ್ಯಪ್ರಾಣಿಯೊಂದನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸುವಲ್ಲಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೆÇಲೀಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ ಪ್ರಾಣಿಯ ಕಳೇಬರ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ಹೋಬಳಿ, ಮೇಟೂರು ಗ್ರಾಮದ ವೆಂಕಟರಮಣ, ತಮಿಳುನಾಡು ತಿರುವಣ್ಣಾಮಲೈ ಜಿಲ್ಲೆಯ ಜಮಣಮತ್ತೂರು ತಾಲ್ಲೂಕಿನ ಕುಂಬಳೂರು ಗ್ರಾಮದ ಕನ್ನಿಯಪ್ಪನ್ ಹಾಗೂ ಅದೇ ಜಿಲ್ಲೆ, ತಾಲ್ಲೂಕು ವಲ್ಲಿಯೂರಿನ ಸುರೇಶ ಎಂಬವರೇ ಬಂಧಿತ ಆರೋಪಿಗಳು.
ಮಂಗಳವಾರ ಬೆಳಗ್ಗಿನ ಜಾವ ಸುಮಾರು 1.45ರ ಸುಮಾರಿಗೆ ಅತ್ತಿಗುಂಡಿ ಗ್ರಾಮದಿಂದ ಮಲಗಾರು ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಕಾರ್ಯತತ್ಪರರಾದ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಟಾರ್ಚ್ ಬೆಳಕಿನಲ್ಲಿ ಓಡಿಹೋಗುತ್ತಿದ್ದ ಆರೋಪಿಗಳನ್ನು ಸುತ್ತುವರಿದಿದ್ದಾರೆ.
ಅನಂತರ ಪಂಚರ ಸಮಕ್ಷಮದಲ್ಲಿ ಅವರಿಂದ ಜಿಂಕೆ ಜಾತಿಗೆ ಸೇರಿದ ಪ್ರಾಣಿಯ ಕಳೇಬರ, ಬಿಳಿ ಬಣ್ಣದ ಒಂದು ಬಟ್ಟೆ ಬ್ಯಾಗ್, ಎರಡು ಹೆಡ್ಲೈಟ್ಗಳು, ಎರಡು ಮರದ ದೊಣ್ಣೆಗಳು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪಮಹಾ ನಿರೀಕ್ಷಕಿ ಜಿ.ಸಂಗೀತ, ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಬಾಬುದ್ದೀನ್ ಹಾಗೂ ಸಿಬ್ಬಂದಿ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್, ಹೇಮಾವತಿ ಹಾಗೂ ಚಾಲಕ ತಿಮ್ಮಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರ ಕಚೇರಿ (9480800220) ಹಾಗೂ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಕಚೇರಿ (8277949809) ದೂರವಾಣಿ ಸಂಖ್ಯೆಗಳಿಗೆ ಕರೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



