ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತಿದ್ದೇವೆ ದೇಣಿಗೆ ನೀಡಿ ಎಂದು ವಂಚಕರ ತಂಡವೊಂದು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಕೇಳಿಬಂದಿದೆ.
ಸರಿಯಾದ ವಿಳಾಸವಿಲ್ಲದ ರಶೀದಿ ನೀಡಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಎಂದು ತಂಡವೊಂದು ಜನರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ.
ಇತ್ತೀಚೆಗೆ ಕಳಸ ತಾಲ್ಲೂಕಿನ ಹೆಮ್ಮಕ್ಕಿ ಭಾಗದಲ್ಲಿ ಕಾಫಿ ಬೆಳೆಗಾರರ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ತಂಡವೊಂದು ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತಿದ್ದೇವೆ ದೇಣಿಗೆ ನೀಡಿ ಎಂದು ಹಣ ವಸೂಲಿ ಮಾಡುತ್ತಿದ್ದಾರೆ.
ಇವರು ನೀಡುವ ರಶೀದಿಯಲ್ಲಿ ಯಾವುದೇ ಸರಿಯಾದ ವಿಳಾಸ, ಮೊಬೈಲ್ ಸಂಖ್ಯೆ ಇರುವುದಿಲ್ಲ. ಈ ಬಗ್ಗೆ ವಿಚಾರಿಸಿದರೆ ಮೂಡಿಗೆರೆ ತಾಲ್ಲೂಕು ಕಸಬಾ ಹೋಬಳಿಯಿಂದ ಬಂದಿದ್ದೇವೆ ಎಂದಿದ್ದಾರೆ. ಒಂದೊಂದು ಮನೆಯಲ್ಲಿ ಒಂದೊಂದು ವಿಳಾಸ ಹೇಳುತ್ತಿದ್ದಾರೆ.
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ, ಕಾರೇಹಳ್ಳಿ ಎಂದಷ್ಟೇ ರಸೀದಿಯಲ್ಲಿ ವಿಳಾಸ ಬರೆಯಲಾಗಿದೆ. ಯಾವ ತಾಲ್ಲೂಕು, ಯಾವ ಜಿಲ್ಲೆ, ಮೊಬೈಲ್ ನಂಬರ್ ಯಾವುದೂ ಅದರಲ್ಲಿ ಇರುವುದಿಲ್ಲ. ದೇವಾಲಯದ ಜೀರ್ಣೋದ್ಧಾರಕ್ಕಾಗಿ ಭಕ್ತಾಧಿಗಳಿಂದ ಧನ ಸಹಾಯಾರ್ಥ ಎಂದು ಹೇಳಿಕೊಂಡು ಐದು ಹತ್ತು ಸಾವಿರಕ್ಕೆ ಬೇಡಿಕೆ ಇಡಲಾಗುತ್ತಿದೆ. ಹಣ ಕೊಡುವ ವರೆಗೆ ಅವರು ಮನೆಬಿಟ್ಟು ಕದಲುವುದಿಲ್ಲ. ಕೊನೆಗೆ ಜನರು ಬೇಸತ್ತು ಐನೂರು ಸಾವಿರ ಎರಡು ಸಾವಿರ ಹೀಗೆ ಹಣ ಕೊಟ್ಟು ಕಳುಹಿಸುತ್ತಿದ್ದಾರೆ.
ಈ ರಸೀದಿಯನ್ನು ನೋಡಿದರೇ ಇದೂ ಪಕ್ಕಾ ವಂಚಕರ ಕೆಲಸ ಎಂಬುದು ಗೊತ್ತಾಗುತ್ತದೆ. ಅಸಲಿಗೆ ಮೂಡಿಗೆರೆ ತಾಲ್ಲೂಕಿನಲ್ಲಿ ಕಾರೇಹಳ್ಳಿ ಎಂಬ ಹೆಸರಿನ ಗ್ರಾಮವೇ ಇಲ್ಲ. ತರೀಕೆರೆ ತಾಲ್ಲೂಕಿನಲ್ಲಿ ಕಾರೇಹಳ್ಳಿ ಎಂಬ ಗ್ರಾಮವಿದ್ದು ಅಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವೇ ಇಲ್ಲ.
ಪತ್ರಿಕೆ ಈ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾದಾಗ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಈ ರೀತಿಯ ವಂಚಕರ ತಂಡಗಳು ಕಾರ್ಯಪ್ರವೃತ್ತವಾಗಿವೆ ಎನ್ನಲಾಗುತ್ತಿದೆ. ತಮ್ಮನ್ನು ನಿವೃತ್ತ ಶಿಕ್ಷಕರು, ಪಂಚಾಯಿತಿ ಮಾಜಿ ಅಧ್ಯಕ್ಷರು, ದೇವಸ್ಥಾನ ಸಮಿತಿ ಅಧ್ಯಕ್ಷರು ಎಂದೆಲ್ಲಾ ಹೇಳಿಕೊಂಡು ಇವರು ಬೆಳಗ್ಗೆ ಎದ್ದರೆ ನೀಟಾಗಿ ಡ್ರೆಸ್ ಮಾಡಿಕೊಂಡು, ಒಂದು ಕಾರು ಬಾಡಿಗೆ ಮಾಡಿಕೊಂಡು ಗುಂಪಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ದೇವಸ್ಥಾನದ ಹೆಸರಿನಲ್ಲಿ ಹಣ ವಸೂಲಿ ಮಾಡುವುದೇ ಇವರ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಹೀಗೆ ಸರಿಯಾದ ವಿಳಾಸ ವಿವರಗಳಿಲ್ಲದೆ ದೇವಸ್ಥಾನದ ಹೆಸರಿನಲ್ಲಿ ಹಣವಸೂಲಿ ಮಾಡಲು ಬಂದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾರೂ ಹಣವನ್ನು ಕೊಟ್ಟು ಮೋಸಹೋಗದಂತೆ ಎಚ್ಚರದಿಂದ ಇರಬೇಕು.



