ದ್ವಿದಳ ಧಾನ್ಯಗಳಲ್ಲಿ ಆತ್ಮ ನಿರ್ಭರತಾ ಅಭಿಯಾನ ಕಾರ್ಯಕ್ರಮದಡಿ ದ್ವಿದಳ ಧಾನ್ಯಗಳ ಮೌಲ್ಯವಧನೆ ಉತ್ತೇಜಿಸಲು ಹಾಗೂ ರೈತರ ಆದಾಯ ಹೆಚ್ಚಿಸಲು ದ್ವಿದಳ ಧಾನ್ಯಗಳ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಘಟಕಗಳ ಸ್ಥಾಪನೆಗೆ ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಘಟಕ ಹಾಗೂ ಯಂತ್ರೋಪಕರಣ, ಕಟ್ಟಡ, ಗೋದಾಮು ನಿರ್ಮಾಣಕ್ಕೆ ಮಾತ್ರ ಸಹಾಯಧನ ಸೌಲಭ್ಯ ಸಿಗುತ್ತದೆ. ಘಟಕ ಸ್ಥಾಪನೆಯ ಒಟ್ಟು ವೆಚ್ಚದಲ್ಲಿ ಶೇ.33 ರಷ್ಟು ಸಹಾಯಧನ ಸೌಲಭ್ಯವಿದ್ದು ಗರಿಷ್ಠ 25 ಲಕ್ಷ ರೂ.ವರೆಗೆ ಪಡೆಯಲು ಅವಕಾಶವಿದೆ. ಕಟ್ಟಡ ಮತ್ತು ಗೋದಾಮು ನಿರ್ಮಾಣಕ್ಕೆ ಅರ್ಹ ಸಹಾಯಧನ ಮೊತ್ತದ ಶೇ.30ರಷ್ಟು ಸಹಾಯಧನ ಬಳಸಿಕೊಳ್ಳಲು ಅವಕಾಶವಿದೆ. ಸಹಾಯಧನ ಪಡೆಯಲು ಬ್ಯಾಂಕ್ ಸಾಲ ಕಡ್ಡಾಯವಾಗಿದೆ. ಅಂತಿಮವಾಗಿ ಫಲಾನುಭವಿಯ ಆಯ್ಕೆಯು ಜಿಲ್ಲಾ ಮಟ್ಟದ ಚಾಲನಾ ಸಮಿತಿಯ ನಿರ್ಣಯಕ್ಕೆ ಒಳಪಟ್ಟಿರುತ್ತದೆ.
ರೈತ ಉತ್ಪಾದಕ ಸಂಸ್ಥೆಗಳು, ಕ್ಲಸ್ಟರ್ ಮಟ್ಟದ ಒಕ್ಕೂಟಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ನೋಂದಾಯಿತ ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭವಿಯು ಅರ್ಜಿ ಸಲ್ಲಿಸಬಹುದು. ಅರ್ಹ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು ಹಾಗೂ ಕನಿಷ್ಠ 2 ವರ್ಷ ಕಾರ್ಯ ನಿರ್ವಹಿಸಿರಬೇಕು. ವೈಯಕ್ತಿಕ ಫಲಾನುಭವಿಯು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು. ಅರ್ಹ ಸಂಸ್ಥೆ, ಫಲಾನುಭವಿಯು ಯೋಜನಾ ವೆಚ್ಚದ ಶೇ.15 ರಷ್ಟು ಸ್ವಂತ ಬಂಡವಾಳ ಹೂಡಿಕೆ ಮಾಡುವ ಸಾಮಾರ್ಥ್ಯ ಹೊಂದಿರಬೇಕು. ಅರ್ಜಿಯನ್ನು ಜೂನ್ 19 ರೊಳಗೆ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರುಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



