ರೈತರ ವಿರೋಧ ಕಟ್ಟಿಕೊಂಡು, ರೈತ ವಿರೋಧ ಕಾನೂನು ತರುವ ಸರಕಾರಗಳು ಚರಿತ್ರೆಯಲ್ಲೇ ಉಳಿದಿಲ್ಲವೆಂದು ಹಿರಿಯ ವಕೀಲ ಎಂ.ಶಿವಪ್ರಸಾಧ್ ಹೇಳಿದರು.
ಅವರು ನಮ್ಮ ಭೂಮಿ ಮತ್ತು ಹಕ್ಕಿಗಾಗಿ ಶನಿವಾರ ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ಏರ್ಪಡಿಸಿದ್ದ ರೈತರ ಬೃಹತ್ ರೈತ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಂದಾಯ ಕಾರ್ಯದರ್ಶಿಗಳು ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾದ ರೈತರ ಭೂಮಿಯ ಬಗ್ಗೆ 3 ತಿಂಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಬೇಕೆಂದು ತನಿಖಾ ತಂಡವೊಂದನ್ನು ನೇಮಿಸಲಾಗಿತ್ತು. ಅದರ ವರದಿಯನ್ನು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಕಳಿಸಬೇಕಿತ್ತು. ನಂತರ ಆ ವರದಿ ಆಧಾರದ ಮೇರೆಗೆ ಸರಕಾರ ಮುಂದಿನ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಅರ್ಜಿಗಳನ್ನೇ ವಜಾ ಮಾಡಿರುವುದು ತಪ್ಪು. ಇದರಿಂದ ಹೆಚ್ಚಾಗಿ 10, 15 ಗುಂಟೆ ಇರುವ ದಲಿತರ, ಅಲ್ಪಸಂಖ್ಯಾತರ, ಹಿಂದುಳಿತ ವರ್ಗದ ಸಣ್ಣ ರೈತರಿಗೆ ತೊಂದರೆಯಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಮಧ್ಯ ಪ್ರವೇಶಿಸಿ, ರೈತರ ಸಮಸ್ಯೆ ಬಗೆಹರಿಸಿದ್ದರೆ ಕಾನೂನು ಸಮರ ಅಗತ್ಯವಿರಲಿಲ್ಲವೆಂದು ಹೇಳಿದರು.
ಹಿರಿಯ ವಕೀಲ ಎಚ್.ಎಂ.ಪ್ರಸಾಧ್ ಮಾತನಾಡಿ, ಅಕ್ರಮವನ್ನು ಸಕ್ರಮ ಮಾಡಿದ್ದು, ಸಕ್ರಮವನ್ನು ಅಕ್ರಮವೆಂದು ಹೇಳುತ್ತಿರುವುದು, ತನಿಖೆ ಮಾಡಿರುವುದು, ನಂತರ ಅರ್ಜಿ ವಜಾ ಮಾಡಿರುವುದು ಸರಕಾರದ ಅಧಿಕಾರಿಗಳೆ. ಆದ ಮೇಲೆ ಇಲ್ಲಿ ರೈತರ ತಪ್ಪೇನಿದೆ?. ಅಧಿಕಾರಿಗಳು ಮಾಡಿರುವ ತಪ್ಪಿನಿಂದ ರೈತರು ಬೀದಿಗೆ ಬರುವ ಸ್ಥಿತಿಗೆ ತಂದಿದ್ದಾರೆ. ಸರಕಾರ ಮಾಡಿರುವ ತಪ್ಪನ್ನು ಈಗ ಸರಕಾರವೇ ಬಗೆಹರಿಸಬೇಕು. ಇದಕ್ಕಾಗಿ ನ್ಯಾಯಾಲಯದವರೆಗೆ ಬರುವ ಅವಶ್ಯಕತೆ ಇರಲಿಲ್ಲ ರೈತರಿಗೆ ತೊಂದರೆ ಕೊಡುವ ಜನಪ್ರತಿನಿಧಿಗಳು ಮತ್ತೆ ಜೀವನದಲ್ಲಿ ಜನಪ್ರತಿನಿಧಿಗಳಾಗಲು ಅವಕಾಶ ಕೊಡಬಾರದೆಂದು ಹೇಳಿದರು.
ಮಾಜಿ ಶಾಸಕ ವೈಎಸ್‍ವಿ ಧತ್ತ ಮಾತನಾಡಿ, ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದ್ದರಿಂದ ಸಾವಿರಾರು ರೈತರಿಗೆ ಪುನರ್‍ಜೀವನ ಸಿಕ್ಕಿದಂತಾಗಿದೆ. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೆ. ಶಾಶ್ವತ ಪರಿಹಾರಕ್ಕಾಗಿ ಸರಕಾರ ರೈತರ ನೆರವಿಗೆ ಬರಬೇಕಾಗಿದೆ. ಅದಕ್ಕಾಗಿ ಬಿ.ಎಲ್.ಶಂಕರ್ ಅವರು ನಮ್ಮ ಹಕ್ಕೊತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಬೇಕು. ಜತೆಗೆ ರೈತರ ನಿಯೋಗ ಕರೆದೊಯ್ದು ರೈತರ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಮಲೆನಾಡು ಭಾಗದ ರೈತರಿಗೆ ಹೋರಾಟದ ಮನಸ್ಥಿತಿ ಬಂದಿರುವುದು ಉತ್ತಮ ಬೆಳವಣಿಗೆ. ತಾನು ಸರಕಾರದ ಯಾವುದೇ ಹುದ್ದೆಯಲ್ಲಿಲ್ಲ, ಆದರೂ ತಾನು ಕೂಡ ಓರ್ವ ರೈತನಾಗಿದ್ದು, ರೈತರ ಹೋರಾಟಕ್ಕೆ ಬೆಂಬಲ ನೀಡುವುದು ತನ್ನ ಕರ್ತವ್ಯ. ತಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ಬಗ್ಗೆ ಚರ್ಚಿಸಿ, ನಂತರ ನಿಯೋಗ ಕರೆದೊಯ್ದು ಸಮಸ್ಯೆ ಬಗೆಹರಿಸಲು ಶ್ರಮಿಸುತ್ತೇನೆಂದು ಹೇಳಿದರು.
ಕಾಂಗ್ರೆಸ್ ಮಖಂಡ ಎಚ್.ಎಚ್.ದೇವರಾಜ್ ಮಾತನಾಡಿ, ಕಾಡು ಪ್ರಾಣಿಗಳಿಂದ ಕಂಗೆಟ್ಟಿದ್ದ ರೈತರು, ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ರೈತರು ಭೂಮಿ ಕಳೆದುಕೊಂಡು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಆಂತಕದ ಸ್ಥಿತಿ ಉಂಟಾಗಿದೆ. ಇದನ್ನು ಶಾಸಕರ ಗಮನಕ್ಕೆ ತಂದರೆ ರೈತರು ಪಾಳೇಗಾರಿಕೆ ಮಾಡುತ್ತಿದ್ದಾರೆಂದು ಹೇಳಿರುವುದು ಸರಿಯಲ್ಲ. ಅಲ್ಲದೇ ತಿಂಗಳಿಗೊಮ್ಮೆ ಮೋಜು ಮಸ್ತಿ ಮಾಡೋಕೆ ಇಲ್ಲಿಗೆ ಬರುತ್ತಿರುವ ಕಂದಾಯ ಕಾರ್ಯದರ್ಶಿಗಳು ಇನ್ನು ಮುಂದೆ ಇಲ್ಲಿಗೆ ಬಾರದಂತೆ ಸರಕಾರಕ್ಕೆ ಎಚ್ಚರಿಸಬೇಕೆಂದು ಆಗ್ರಹಿಸಿದರು.

ಸಮಾವೇಶದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಿತು. ಸಮಾವೇಶಕ್ಕೆ ಬಂದಿದ್ದ ಸಾವಿರಾರು ರೈತರು ವಕಾಲತ್ತು ಅರ್ಜಿಯನ್ನು ಹಿರಿಯ ವಕೀಲರಾದ ಎಂ.ಶಿವಪ್ರಸಾಧ್, ಎಚ್.ಎಂ.ಪ್ರಸಾಧ್ ಅವರಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್‍ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಹ್ಯಾರಗುಡ್ಡೆ, ಉಪಾಧ್ಯಕ್ಷರಾದ ಗಬ್ಬಳ್ಳಿ ಚಂದ್ರೇಗೌಡ, ಬಂಕೇನಹಳ್ಳಿ ಸುರೇಶ್, ಕಾರ್ಯದರ್ಶಿಯಾದ ನವೀನ್ ಮರೆಬೈಲ್, ಎಂ.ಕೆ.ರವಿ ಮಗ್ಗಲಮಕ್ಕಿ, ಮಂಜಪ್ಪಯ್ಯ ಕಳಸ, ರಾಧಾ ಸುಂದ್ರೇಶ್, ಬಿ.ಎಸ್.ಜಯರಾಂಗೌಡ, ಅಬ್ದುಲ್ ರೆಹಮಾನ್ ಮತ್ತಿತರರಿದ್ದರು. ಅನಿಲ್ ಗುರುದೇವ್ ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವರುಂದ, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಸೇರಿದಂತೆ ಮೂಡಿಗೆರೆ, ಕಡೂರು ಮತ್ತು ಕಳಸ ಭಾಗದ ವಿವಿಧ ಪಕ್ಷಗಳ, ಸಹಕಾರಿ ಸಂಸ್ಥೆಗಳ, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ರೈತ ಭವನ ತುಂಬಿ ತುಳುಕುವಷ್ಟು ಸಂಖ್ಯೆಯಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು.

ಬೃಹತ್ ರೈತ ಸಮಾವೇಶ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಂ.ಶಿವಪ್ರಸಾಧ್, ಎಚ್.ಎಂ.ಪ್ರಸಾಧ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. .



