suddi-12

 

 

ಜಿಲ್ಲೆಯ ಅರಣ್ಯ, ಭೂಮಿ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ರೈತಪರ ಸಂಘಟನೆಗಳು ಹಾಗೂ ವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮೇ 27 ರಂದು ಬೆಳಿಗ್ಗೆ 10 ಗಂಟೆಗೆ ನಗರದ ತಾಲ್ಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು.

ಸರ್ಕಾರ ನಿಯೋಜಿಸಿರುವ ಎಸ್.ಐ.ಟಿ.ಯಲ್ಲಿರುವ ಅಧಿಕಾರಿಗಳಾದ ವಿ.ಎ, ಆರ್.ಐ, ಸರ್ವೆಯರ್ ಮತ್ತು ಅರಣ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ಸರ್ವೆ ವೇಳೆ ಕಡ್ಡಾಯವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಪಿ.ಡಿ.ಒ ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಿ ರೈತರ ಭೂಮಿ, ಶಾಲೆ, ಆಟದ ಮೈದಾನ, ಸ್ಮಶಾನ, ಆಶ್ರಯ ನಿವೇಶನ ಇತ್ಯಾದಿಗಳಿಗೆ ಮುಂದಿನ 50 ವರ್ಷಗಳಲ್ಲಿ ಆಗಬಹುದಾದ ಜನಸಂಖ್ಯೆ ಅಂದಾಜಿಸಿ ನಾಗರೀಕ ಅಗತ್ಯತೆಗಳಿಗೆ ಮೀಸಲಿಟ್ಟು ಅರಣ್ಯ ಸ್ವರೂಪದ ಭೂಮಿಗಳನ್ನು ಮಾತ್ರ ಡೀಮ್ಸ್ ವ್ಯಾಪ್ತಿಗೆ ನಕ್ಷೆ ತಯಾರಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಪೋಡಿ ಮಾಡಲು ಪಹಣಿಯಲ್ಲಿ ಅರಣ್ಯ ಎಂದು ನಮೂದಾಗಿರುವ ಸರ್ವೆ ನಂಬರ್‍ಗಳನ್ನು ಮಾತ್ರ ಅರಣ್ಯ ಇಲಾಖೆ ಎನ್.ಓ.ಸಿ ಗೆ ಕಳುಹಿಸಬೇಕು ಅರಣ್ಯ ಎಂದು ನಮೂದಾಗದ ಸರ್ವೆ ನಂಬರ್‍ಗಳನ್ನು ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಪೋಡಿ ಮಾಡಲು ಕಳುಹಿಸಿ ವಿಳಂಬಗೊಳಿಸಬಾರದು ಎಂದು ಹೇಳಿದರು.

ಜಂಟಿ ಸರ್ವೆಯಲ್ಲಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಾಕಿ ಇರುವ ಆಶ್ರಯ ನಿವೇಶನದ ಕಡತಗಳ ಪ್ರಕ್ರಿಯೆ ಅಂತಿಮಗೊಳಿಸಿ ಬಡವರಿಗೆ ನಿವೇಶನ ನೀಡಬೇಕು. ಅರಣ್ಯ ವ್ಯವಸ್ಥಾಪನಾಧಿಕಾರಿ (ಎಫ್.ಎಸ್.ಓ) ರವರಿಂದ ಅಂತಿಮ ಆದೇಶಗೊಳಿಸಿ ಅರಣ್ಯ ಇಲಾಖೆಗೆ ಕಳಿಸಲಾಗಿರುವ ಎಲ್ಲಾ ಕಡತಗಳನ್ನು ಡಿ.ಎಫ್.ಓ. ರವರ ಸಹಿಯೊಂದಿಗೆ ಮುಂದಿನ ಹಂತಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಯೋಜನೆಯನ್ನು ಈಗಾಗಲೇ ಗ್ರಾಮ ಪಂಚಾಯಿತಿಗಳು ನೀಡಿರುವ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಬೇಕು ಮತ್ತು ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ನಾರುಕಂತೆ ಮಠ, ದತ್ತಪೀಠ ಬಾಬಾ ಬುಡನ್‍ಗಿರಿ, ಬಿಸಗ್ನಿ ಮಠದಂತಹ ಶ್ರದ್ದಾ ಕೇಂದ್ರಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಧಕ್ಕೆ ಬಾರದಂತೆ ಕ್ರಮ ವಹಿಸಬೇಕು ಎಂದರು.

ಇನಾಂ ಭೂಮಿಗಳ ಸಮಸ್ಯೆ ಸರಿಪಡಿಸಿ ಅತ್ತಿಗುಂಡಿ, ಮಹಲ್, ಬಿಸಗ್ನಿಮಠ ಗ್ರಾಮಸ್ಥರು ಹಾಗೂ ರೈತರ ನೆರವಿಗೆ ಬರಬೇಕು. ಈಗಾಗಲೇ ಸೆಕ್ಷನ್ 4 (1) ಪ್ರಕರಣಗಳಲ್ಲಿ ಮೀಸಲು ಅರಣ್ಯಕ್ಕೆ, ಉದ್ಯೋಷಣೆಗಿಂತ ಹೆಚ್ಚಿನ ಭೂಮಿಗಳನ್ನು ಸೆಕ್ಷನ್ 17 ಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು, ಈ ಹೆಚ್ಚುವರಿ ಭೂಮಿಗಳನ್ನು ಮಸಗಲಿ, ಇಂದಾವರ, ಕಾಮೇನಹಳ್ಳಿ ಅರಣ್ಯ ಪ್ರದೇಶಗಳ ರೈತರ ಸಮಸ್ಯೆಗೆ ಬದಲಿ ಜಮೀನಾಗಿ ಬಳಸಿಕೊಂಡು ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಅರಣ್ಯ ವಾಸಿಗಳ ಬದುಕು ಕಟ್ಟಿಕೊಡಬೇಕು.

ರೈತರು ನಮೂನೆ 57ರಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ನಮೂನೆ 53ಕ್ಕೆ ಪರಿವರ್ತಿಸಿ ಅರ್ಹ ಫ್ಲಾಂಟೇಷನ್ ರೈತರಿಗೂ ಸಾಗುವಳಿ ನೀಡಬೇಕು. ಮತ್ತು ರೈತರಿಂದ ಪಡೆಯಲಾಗಿರುವ ಲೀಜ್ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.

ನಗರ ಪ್ರಾಧಿಕಾರ ಇತ್ತೀಚೆಗೆ ತಯಾರಿಸಿದ ಹೊಸ ನಕ್ಷೆಯಲ್ಲಿ ರೈತರ ಹಿಡುವಳಿ ಮತ್ತು ರಸ್ತೆಗಳನ್ನು ಸರಿಯಾಗಿ ಗುರುತಿಸದೆ ಅರಣ್ಯ ಎಂದು ಗುರುತಿಸಿರುವುದನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಇತ್ಯರ್ಥಗೊಳಿಸಬೇಕು, ಈ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ಸಭೆ ಏರ್ಪಡಿಸಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ  ಸಂಚಾಲಕ ರಘು, ಮಹೇಶ್ ಕೆರೆಮಕ್ಕಿ, ಲೋಕೇಶ್, ಕುಮಾರ ಸ್ವಾಮಿ, ಮುನ್ನಾ, ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ