ಮೂಡಿಗೆರೆ ತಾಲೂಕಿನ ಮಣ್ಣಿಕೆರೆ ಗ್ರಾಮದಲ್ಲಿ ಟಿಯುಸಿಐ ಮತ್ತು ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ನಿವೇಶನ ರಹಿತರು ನಿವೇಶನಕ್ಕಾಗಿ ಒತ್ತಾಯಿಸಿ ಶುಕ್ರವಾರ ಗುಡಿಸಲು ನಿರ್ಮಿಸಿ ಧರಣಿ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ತಾಲೂಕಿನ ಗೋಣಿಬಿಡು ಗ್ರಾ.ಪಂ. ವ್ಯಾಪ್ತಿಯ ಮಣ್ಣಿಕೆರೆ ಗ್ರಾಮದ ಸರ್ವೇ ನಂಬರ್ 144 ರಲ್ಲಿ 3.20 ಎಕರೆ ಸರಕಾರಿ ಭೂಮಿಯನ್ನು ಕಳೆದ ಹತ್ತು ವರ್ಷದ ಹಿಂದೆ ನಿವೇಶನಕ್ಕೆ ಕಾಯ್ದಿರಿಸಲಾಗಿತ್ತು. ನಿವೇಶನ ಹಂಚಿಕೆ ಮಾಡುವಂತೆ ಅನೇಕ ವರ್ಷದಿಂದ ಪ್ರತಿಭಟನೆ ನಡೆಸಲಾಗಿದೆ. ಆದರೆ ತಾಲೂಕು ಆಡಳಿತ ಯಾವುದೇ ಕ್ರಮ ವಹಿಲ್ಲ. ಹಾಗಾಗಿ ಇಲ್ಲಿಯೇ ಗುಡಿಸಲು ನಿರ್ಮಿಸಿ ವಾಸ್ತವ್ಯ ಹೂಡಲು ನಿರ್ಧರಿಸಲಾಗಿದೆ. ಅಲ್ಲದೇ ಈ ಜಾಗದಲ್ಲಿ ಈಗಾಗಲೇ ಒರ್ವ ವ್ಯಕ್ತಿ ಪ್ರಭಾವ ಬಳಿಸಿ ಮನೆ ನಿರ್ಮಿಸಿದ್ದು, ಇದನ್ನು ಕೂಡ ತೆರವುಗೊಳಿಸಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಜನಪ್ರತಿನಿಧಿಗಳು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಸುಳ್ಳು ಹೇಳುತ್ತಾ ಕಾಲಾಹರಣ ಮಾಡುತ್ತಿದ್ದರಿಂದ ತಾಲೂಕಿನಲ್ಲಿ ಕಂದಾಯ ಭೂಮಿ, ಗೋಮಾಳ, ಗೈರಾಣಿ ಗೋಮಾಳ, ಕೆರೆ ಅಂಗಳ, ಹುಲ್ಲು ಬನ, ಸೇರಿದಂತೆ ಎಲ್ಲಾ ಭೂಮಿ ಉಳ್ಳವರ ಪಾಲಾಗಿದ್ದು, ನಿವೇಶನಕ್ಕೆ ಜಾಗ ಸಿಗದಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಿವೇಶನ ರಹಿತರ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಸಂದೀಪ್, ಗೋಣಿಬೀಡು ಹೋಬಳಿ ವಸತಿಗಾಗಿ ಹೋರಾಟ ವೇದಿಕೆ ಕಾರ್ಯದರ್ಶಿ ರಾಜೇಶ್, ಉಮೇಶ್, ಸುರೇಶ್, ಗೋಪಾಲ್, ಕೃಷ್ಣ, ಜಾನಕಿ, ಯಶೋಧ ಮತ್ತಿತರರಿದ್ದರು.



