ಯಕ್ಷರಂಗದ ಧ್ರ್ರುವತಾರೆ ಭಾಗವತ ಗುಂಡ್ಮಿ ಆರ್.ಕಾಳಿಂಗ ನಾವಡರು ದೇವರು ನೀಡಿದ ವರದಂತೆ ಬಂದು ಮಿಂಚಿ ಮಾಯವಾದವರು. ಅವರ ಭಾಗವತಿಕೆಯಲ್ಲಿ ಸಾಂಪ್ರದಾಯಿಕತೆ ಮತ್ತು ಆಧುನಿಕ ಪ್ರಯೋಗಶೀಲತೆಗಳೆರಡೂ ಮೇಳೈಸಿದ್ದವು ಎಂದು ಯಕ್ಷ ಸಂಘಟಕ ನಾಗರಾಜರಾವ್ ಕಲ್ಕಟ್ಟೆ ತಿಳಿಸಿದರು.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ಬುಧವಾರ ಕಲ್ಕಟ್ಟೆ ಪುಸ್ತಕದ ಮನೆ, ಲಯನ್ಸ್ ಕ್ಲಬ್, ಸೂರಂಕಣ, ನಾಯ್ಡು ಡಿಜಿಟಲ್ಸ್ ಸಹಯೋಗದಲ್ಲಿ ನಡೆದ `ನಾವಡ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿನಾಲ್ಕನೆ ವಯಸ್ಸಿನಲ್ಲಿ ಭಾಗವತರಾದ ನಾವಡರು ಬದುಕಿದ್ದು ಮೂವತ್ಮೂರು ವರ್ಷಗಳ ಕಾಲ. ಹತ್ತೊಂಭತ್ತು ವರ್ಷಗಳ ಕಾಲ ಯಕ್ಷರಂಗದಲ್ಲಿ ಭಾಗವತಿಕೆಗೆ ತಾರಾಮೌಲ್ಯ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುರುಗಳಾದ ತಂದೆ ರಾಮಚಂದ್ರ ನಾವಡ ಹಾಗೂ ಉಪ್ಪೂರು ನಾರಾಣಪ್ಪ ಭಾಗವತರಲ್ಲದೇ ಹಲವು ಮಾನಸಿಕ ಗುರುಗಳ ಮಾರ್ಗದರ್ಶನದಲ್ಲಿ ಅವರು ಭಾಗವತಿಕೆಯಲ್ಲಿ ತೋರಿದ ಹೊಸತನ, ಗಾಯನದ ನಾವಡೀಕರಣದಿಂದಾಗಿ ಕನಿಷ್ಠ ಎರಡು ಜನರೇಷನ್ ಅಭಿಮಾನಿಗಳು ಯಕ್ಷರಂಗಕ್ಕೆ ಅವರಿಂದಾಗಿ ಬಂದರು ಎಂದು ತಿಳಿಸಿದರು.
ಅವರು ಬರೆದ ಹೊಸತನದ ಪ್ರಸಂಗಗಳಾದ ನಾಗಶ್ರೀ, ಭಾಗ್ಯಶ್ರೀ, ರೂಪಶ್ರೀ, ವಿಜಯಶ್ರೀ, ಕಾಂಚನಶ್ರೀಗಳು ಪ್ರದರ್ಶನ ರಂಗದಲ್ಲಿ ಸಂಚಲನ ಮಾಡಿದಂತಹವು. ವಿಮಾನ ಭಾಗವತ ಎಂದೇ ಖ್ಯಾತರಾದ ಅವರು ಮುಂಬೈ, ಗಲ್ಫ್ ದೇಶಗಳಿಗೆ ತೆರಳಿ ಅಲ್ಪಾವಧಿ ಕಾರ್ಯಕ್ರಮ ನೀಡಿ ರಂಗದ ಜನಪ್ರಿಯತೆ ಹೆಚ್ಚಿಸಿದರು. ಚಿಟ್ಟಾಣಿಯವರೊಂದಿಗೆ ಇವರ ಕಾಂಬಿನೇಷನ್‍ನ ಮೋಹಿನಿ ಭಸ್ಮಾಸುರ ಪ್ರಸಂಗವು ಮುಂಬೈ ಒಂದರಲ್ಲೇ 40 ಪ್ರದರ್ಶನ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. 1990ರಲ್ಲಿ ಅವರು ನಿಧನರಾದ ವರ್ಷವೇ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರ ರಾಜ್ಯ ಪ್ರಶಸ್ತಿ ನೀಡಿದ್ದು ಸ್ತುತ್ಯಾರ್ಹ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಅಲ್ಪ ಕಾಲದಲ್ಲಿ ಮಹತ್ತನ್ನು ಸಾಧಿಸಿದ ನಾವಡರನ್ನು ಎಲ್ಲೆಡೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಯುವ ಜನಕ್ಕೆ ಪ್ರೇರಣೆ ನೀಡಲಿವೆ ಎಂದರು.
ನಾವಡ ನಮನದ ಪ್ರಯುಕ್ತ ನಡೆದ ಗಾನ ವೈವಿಧ್ಯದಲ್ಲಿ ಮಲೆನಾಡು ಕೋಗಿಲೆ ಹರಿಹರಪುರ ಶಿವಶಂಕರ ಭಾಗವತರ ನೇತೃತ್ವದಲ್ಲಿ ರಾಮಾಯಣ, ಮಹಾಭಾರತ ಮತ್ತು ನಾವಡ ವಿರಚಿತ ಪ್ರಸಂಗಗಳ ಪದ್ಯಗಳ ಗಾಯನ ನಡೆಯಿತು. ಸಾವೇರಿ, ರೇವತಿ, ಹಂಸಾನಂದಿ, ಮೋಹನ, ಹಿಂದೋಳ, ಮಧ್ಯಮಾವತಿ, ಮುಂತಾದ ರಾಗಗಳ ಪಧ್ಯಗಳು ಪ್ರೇಕ್ಷಕರ ಭಾರೀ ಮೆಚ್ಚುಗೆ ಪಡೆದವು. ನಾಗರಾಜರಾವ್ ಅವರು ಅಮೃತಮತಿ ಹಾಗೂ ರತ್ನಾವತಿ ಪರಿಣಯದ ಪದ್ಯಗಳನ್ನು ಹಾಡಿದರು. ಚಂಡೆಯಲ್ಲಿ ಮಲೆನಾಡ ಬಹುಮುಖಿ ಪ್ರತಿಭೆ ಜನಾರ್ದನ ಮಂಡಗಾರು, ಮದ್ದಲೆಯಲ್ಲಿ ಭಾಗವತರ ಮನೆ ವೆಂಕಟೇಶ್, ಸಾಂದರ್ಭಿಕ ವಿವರಣೆಯಲ್ಲಿ ಯಕ್ಷ ಸಿರಿ ನಾಟ್ಯ ವೃಂದದ ಶ್ರೀ ಪರಮೇಶ್ವರ ಚಿಕ್ಕಮಗಳೂರು ಸಹಕರಿಸಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ಸಿ.ಎನ್.ಕುಮಾರ್, ಪ್ರಾಂತೀಯ ಅಧ್ಯಕ್ಷರಾದ ವೆಂಕಟೇಶ್, ಲಯನ್ಸ್ ಸಂಸ್ಥೆಯ ಗೋಪಿಕೃಷ್ಣ, ಬಾಲಕೃಷ್ಣ, ಯಕ್ಷಗಾನ ಅಭಿಮಾನಿ ಬಳಗದ ಸುರೇಂದ್ರ ಶೆಟ್ಟಿ, ಕೆ.ಎನ್.ಮಂಜುನಾಥ ಭಟ್, ನಾಯ್ಡು ಡಿಜಿಟಲ್ಸ್‍ನ ಶ್ರೀನಿವಾಸ ನಾಯ್ಡು ಉಪಸ್ಥಿತರಿದ್ದರು. ಯಕ್ಷಸಿರಿ ನಾಟ್ಯವೃಂದ, ತ್ರಯಿ ಕಲ್ಚರಲ್ಸ್ ಸಹಕಾರವಿದ್ದ ಸಭಾ ಕಾರ್ಯಕ್ರಮದಲ್ಲಿ ಕಲಾವಿದೆ ವೀಣಾ ಅರವಿಂದ್ ಪ್ರಾರ್ಥಿಸಿದರು. ಲಯನ್ ಜಿ.ರಮೇಶ್ ವಂದಿಸಿದರು.



