ಎಂಜಿಎಂ ಆಸ್ಪತ್ರೆ ಟ್ರಸ್ಟಿ ಅಧ್ಯಕ್ಷ ಹಾಗೂ ಹಿರಿಯ ಕಾಫಿ ಬೆಳೆಗಾರ ಎನ್.ಎಲ್.ಸುಂದರೇಶ್ವರ್ ಅವರ ನಿಧನದಿಂದ ಸಮಾಜಕ್ಕೆ ಅಪಾರ ನಷ್ಟಉಂಟಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಜಯರಾಂಗೌಡ ಹೇಳಿದರು.

ಅವರು, ಹಿರಿಯ ಕಾಫಿ ಬೆಳೆಗಾರ ಎನ್.ಎಲ್.ಸುಂದರೇಶ್ವರ್ ಅವರ ನಿಧನದ ಹಿನ್ನಲೆಯಲ್ಲಿ ಶನಿವಾರ ಮೂಡಿಗೆರೆ ಪಟ್ಟಣದ ವಿಎಸ್ ಬಿಜಿಎಸ್ ಶಾಲೆಯಲ್ಲಿ ಒಕ್ಕಲಿಗರ ಸಂಘ ಎಜುಕೇಷನ್ ಟ್ರಸ್ಟಿಯಿಂದ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದರು. ಎನ್.ಎಲ್.ಸುಂದರೇಶ್ವರ್ ಅವರು ತಮ್ಮ ಜೀವನದ ಅಮೂಲ್ಯ ಸಮಯವನ್ನೆಲ್ಲ ಜನಸೇವೆಗೆ ಮೀಸಲಿಟ್ಟಿದ್ದರು. ಅವರ ಸಮಯ ಪಾಲನೆ ಮತ್ತು ಜನಪರ ಕಾಳಜಿ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪಿ. ಮನು ಮಾತನಾಡಿ, ಎನ್.ಎಲ್.ಸುಂದರೇಶ್ವರ್ ಅವರು ಎಂಜಿಎಂ ಟ್ರಸ್ಟಿಯಾಗಿ, ನಂತರ ಅಧ್ಯಕ್ಷರಾಗಿ ಆಸ್ಪತ್ರೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೂಡಿಗೆರೆಯಲ್ಲಿ ಜೇಸಿ ಹಾಗೂ ಲಯನ್ಸ್ ಸಂಸ್ಥೆಯನ್ನು ಪ್ರಾರಂಭಿಸಿ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ವಿ.ಎಸ್. ಎಜುಕೇಷನಲ್ ಟ್ರಸ್ಟಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಈ ಅಗಲಿಕೆ ವೈಯುಕ್ತಿಕ ನಷ್ಟ ಮಾತ್ರವಲ್ಲ. ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಹಿರಿಯ ವೈದ್ಯ ಡಾ.ಅನಂತ ಪದ್ಮನಾಭ, ಎನ್.ಎಲ್.ಪುಣ್ಯಮೂರ್ತಿ, ವಿವೇಕ್ ಪುಣ್ಯಮೂರ್ತಿ, ಎಂ.ಡಿ.ಜಯಪಾಲ್, ನವೀನ್ ಪಲ್ಗುಣಿ ಮಾತನಾಡಿದರು.
ಪ್ರಾಂಶುಪಾಲ ಸಂದೇಶ್, ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.



