ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನ ಅಕ್ರಮ ಸಕ್ರಮ ಅಡಿಯಲ್ಲಿ ನೀಡಿದ ಸಾಗುವಳಿ ಚೀಟಿ ರದ್ದು ಮಾಡಿರುವುದನ್ನು ಪುನರ್ ಪರಿಶೀಲಿಸಿ ಮುಂದುವರೆಸಲು ಅನುವು ಮಾಡುವಂತೆ ಕೋರಿ ಮೂಡಿಗೆರೆ ರೈತ ಹಿತರಕ್ಷಣಾ ವೇದಿಕೆ ಸದಸ್ಯರು ವಿಧಾನ ಪರಿಷತ್ ಸದಸ್ಯೆ ಆರತಿಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು 8 ಸಾವಿರ ರೈತ ಕುಟುಂಬಗಳು ಅಕ್ರಮ ಸಕ್ರಮ ಫಾರಂ 50-53 ಅಡಿಯಲ್ಲಿ ಅರ್ಜಿ ಸಲ್ಲಿಸಿ ಕಾನೂನುಬದ್ದ,ಸಕ್ರಮವಾಗಿ ಸಾಗುವಳಿ ಚೀಟಿ ಪಡೆದು ಜೀವನ ಸಾಗಿಸುತ್ತಿವೆ.ರಾಜಕೀಯ,ವೈಯಕ್ತಿಕ ನೆಲೆಯಲ್ಲಿ ಕೆಲವು ಬಿನ್ನಾಭಿಪ್ರಾಯಗಳು ಸೃಷ್ಟಿಯಾದ ಕಾರಣ ಸಾಗುವಳಿ ಚೀಟಿ ಪಡೆದಿದ್ದನ್ನು ಹಗರಣ ಎಂಬಂತೆ ಬಿಂಬಿಸಿ,ತನಿಖೆಗೆ ಆಗ್ರಹಿಸಿದ ಕಾರಣ ಸಾವಿರಾರು ಸಾಗುವಳಿ ಚೀಟಿಗಳನ್ನು ಸರ್ಕಾರ ರದ್ದು ಮಾಡಿದೆ.ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು,ಜಿಲ್ಲಾಧಿಕಾರಿ ಹಾಗೂ ಕಂದಾಯ ಉಪ ವಿಭಾಗಾಧಿಕಾರಿ ಏ.10.2024 ರಂದು ಸಾಗುವಳಿ ಚೀಟಿ ರದ್ದು ಮಾಡಿ ಹೊರಡಿಸಿದ ಆದೇಶ ಹೊರನೋಟಕ್ಕೆ ಕಾನೂನು ಬಾಹಿರ ಎಂದು ನಿರ್ಣಯಿಸಿ ಸರ್ಕಾರದ ಆದೇಶಕ್ಕೆ ಏ.29,20226 ರಂದು ತಡೆಯಾಜ್ಞೆ ನೀಡಿದೆ. ಆದರೆ ಈಗಾಗಲೇ ರೈತರ ಹೆಸರಿನಲ್ಲಿದ್ದ ಪಹಣಿ ಕಾಲಂಗಳಲ್ಲಿ ‘ಸರ್ಕಾರಿ’ ಎಂದು ನಮೂದಾದ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ದೊರೆಯುವ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ.ಇದರಿಂದಾಗಿ ತುಂಬಲಾರದ ನಷ್ಟವಾಗಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ.ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸದೆ ಬಡವರು,ದಲಿತರು,ಅಲ್ಪಸಂಖ್ಯಾತರ ಸಾಗುವಳಿ ಭೂಮಿಯನ್ನು ರದ್ದು ಮಾಡಿದ್ದಾರೆ.ಸಾಗುವಳಿ ಚೀಟಿ ಹೊಂದಿದ ಕೃಷಿ ಭೂಮಿ ಮೇಲೆ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದು ವಾಪಸ್ಸು ಕಟ್ಟುಲು,ಮರು ಹೊಂದಾಣಿಕೆ ಮಾಡಲು,ಜಮೀನಿಗೆ ಬೇಕಾಗುವಷ್ಟು ರಸಗೊಬ್ಬರ ಪಡೆಯಲು ಸಾಧ್ಯವಾಗುತ್ತಿಲ್ಲ.ಮಂಜೂರಿ ಆಗಿರುವ ಪಹಣಿಯ ಬೆಳೆ ನಮೂದು(ಪ್ರೋಟ್ ಐಡಿ) ಆಗದಂತೆ ಉಪವಿಭಾಗಾಧಿಕಾರಿಗಳು ತಡೆಹಿಡಿದಿದ್ದಾರೆ.ಈ ಕೂಡಲೆ ಇದನ್ನು ಸರಿಪಡಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು.ಉಚ್ಚನ್ಯಾಯಾಲಯದ ರಿಟ್ ಅರ್ಜಿ ತೀರ್ಪಿಗೆ ಒಳಪಡುವಂತೆ ಪಹಣಿ ಕಾಲಂ ನಲ್ಲಿ ಖಾತೆದಾರರ ಹೆಸರು ನಮೂದು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ರೈತರ ಸಮಸ್ಯೆಯನ್ನು ಕಂದಾಯ ಸಚಿವರ ಚರ್ಚಿಸಿ ಇಲಾಖೆ ಅಧಿಕಾರಿಗಳ ಗಮನ ಸೆಳೆಯುತ್ತೇನೆ ಎಂದು ಆರತಿ ಕೃಷ್ಣ ಪ್ರತಿಕ್ರೀಯಿಸಿದರು.ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ,ದೀಪಕ್ ದೊಡ್ಡಯ್ಯ, ಬೆಳೆಗಾರರ ಸಂಘದ ಪದಾಧಿಕಾರಿಗಳು ಇದ್ದರು.



