ರಕ್ತವು ಮಾನವನ ಜೀವ ಉಳಿಸುವ ಅಮೂಲ್ಯ ಸಂಪನ್ಮೂಲವಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಮಾನವನ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗಿಲ್ಲ ಎಂದು ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್‍ನ ಸಂಸ್ಥಾಪಕ ಅಲ್ತಾಫ್ ಬಿಳಗುಳ ಹೇಳಿದರು.
ಅವರು ಭಾನುವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಮತ್ತು ಜೇಸಿಐ ಸಂಸ್ಥೆಯಿಂದ ವಿಶ್ವ ರಕ್ತದಾನಿಗಳ ದಿನ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸಂದರ್ಭಗಳು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಜೀವದಾನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜೇಸಿಐ ಅಧ್ಯಕ್ಷ ಎಂ.ಎಲ್.ಸುನೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನದಿಂದ ಉತ್ತಮ ಆರೋಗ್ಯ ವೃದ್ಧಿಯಾಗುವ ಜತೆಗೆ ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ. ರಕ್ತದಾನದ ಮಹತ್ವವನ್ನು ಅರಿತು, ನಿಯಮಿತವಾಗಿ ರಕ್ತದಾನ ಮಾಡುವ ಸಂಕಲ್ಪ ಎಲ್ಲರೂ ಮಾಡಬೇಕು. ನಮ್ಮ ಒಂದು ಚಿಕ್ಕ ಸಹಾಯ ಯಾರದೋ ಕುಟುಂಬದಲ್ಲಿ ಸಂತಸ ಮೂಡಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ್ ಕೆ.ಭರತ್, ರಕ್ತದಾನ ಮಾಡಿ ಮಾತನಾಡಿದರು. ಶಿಬಿರದಲ್ಲಿ 30 ಮಂದಿ ರಕ್ತದಾನ ಮಾಡಿದರು. ಜತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಪರಿಸರ ಉಳಿಸಲು ಗಿಡಗಳನ್ನು ವಿತರಿಸಲಾಯಿತು.
ಜೇಸಿ ಕಾರ್ಯದರ್ಶಿ ಅಕ್ಷತ್ ಪಟದೂರು. ಐ್ರಸ್ಟ್‍ನ ಪ್ರವೀಣ್ ಕೃಷ್ಣಾಪುರ, ರಕ್ತನಿದಿ ಮುಖ್ಯಸ್ಥ ಸುನೀಲ್, ಜೇಸಿ ನಿಕಟವೂರ್ವ ಅಧ್ಯಕ್ಷ ಸುಪ್ರಿತ್ ಕಾರ್ಬೈಲ್, ವಿಜಯ್‍ಕುಮಾರ್, ಅಕ್ಷತ್, ಸುದೀಪ್ ಮತ್ತಿತರರಿದ್ದರು.



