ಶ್ರೀರಾಮನ ಹೆಸರಿನಲ್ಲಿ ಹಿಂದೂಗಳ ಹಣ ದೋಚಿದ ಬಿಜೆಪಿಯವರು ಇನ್ನು ಮುಂದೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮರ್ಯಾದ ಪುರುಷ ರಾಮನ ಹೆಸರಿನಲ್ಲಿ ದೋಚಿದ ಕೋಟಿ ಕೋಟಿ ಹಣದಲ್ಲಿ ಬಿಜೆಪಿಯವರಿಗೆ ಎಷ್ಟು ಪಾಲು ಹೋಗಿದೆ ? ಅಯೋಧ್ಯೆ ರಾಮ ಮಂದಿರದ ಕಾಮಗಾರಿ ಪೂರ್ಣ ಮುಕ್ತಾಯವಾಗುವ ಮುನ್ನವೆ ತರಾತುರಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಉದ್ಘಾಟನೆ ಮಾಡಿದ್ದು, ಟ್ರಸ್ಟಿಗಳಿಗೆ ಕೊಳ್ಳೆ ಹೊಡೊಯಲು ಅನುಕೂಲ ಮಾಡಲು ಎಂಬುದು ಇದೀಗ ದೇಶದ ಜನತೆಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಟೀಕಿಸಿದ್ದಾರೆ.
ದೇಶದ ಲಕ್ಷಾಂತರ ಶ್ರೀರಾಮ ಭಕ್ತರು ಕಣ್ಣಿಗೆ ಕಾಣಿಸುವಂತೆ ನೀಡಿದ ಕಾಣಿಕೆಯನ್ನೇ ದೋಚಿದರು. ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಬಿಜೆಪಿ ಸಂಗ್ರಹಿಸಿದ ಇಟ್ಟಿಗೆ, ಕಬ್ಬಿಣ ಎಲ್ಲಿ ಹೋಯಿತು ಎಂದು ಸಾರ್ವಜನಿಕ ಚರ್ಚೆ ಆರಂಬವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ರಾಮನ ಹೆಸರಿನಲ್ಲಿ ದುಡ್ಡು ಹೊಡೆಯುವ ದಂಧೆಯನ್ನೇ ಇಷ್ಟು ದಿನ ಬಿಜೆಪಿಯವರು ಯುಪಿ ಮಾಡೆಲ್, ಯುಪಿ ಮಾಡೆಲ್ ಎಂದು ಗುಣಗಾನ ಮಾಡುತ್ತಿದ್ದಾರಾ ಎಂದು ಬಿಜೆಪಿ ಸ್ಪಷ್ಟಪಡಿಸಬೇಕಿದೆ. ಜಿಲ್ಲೆಯಲ್ಲಿ ಗುರು ದತ್ತಾತ್ರೇಯನ ಹೆಸರಿನಲ್ಲಿ ರಾಜಕಾರಣ ಮಾಡಿದವರು ಇಂದು ಯಾವ ಪರಿಸ್ಥಿತಿ ತಲುಪಿದ್ದಾರೋ ಅದೇ ರೀತಿ ಶ್ರೀರಾಮನ ಹೆಸರಿನಲ್ಲಿ ಕೇಂದ್ರದಲ್ಲಿ ರಾಜಕಾರಣ ಮಾಡಿದವರು ಮೂಲೆ ಸೇರಲಿದ್ದಾರೆ ಎಂದರು.
ಹಾಸ್ಯಸ್ಪದವೆಂದರೆ ನಿನ್ನೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ದೇವಾಲಯದ ಟ್ರಸ್ಟ್‍ಗೆ ಹಣಕಾಸಿನ ವ್ಯವಹಾರದ ಲೆಕ್ಕ ಕೇಳಿದ್ದಕ್ಕೆ ಸಮಿತಿಯವರು ಸದ್ಯಕ್ಕೆ ಲೆಕ್ಕ ಕೊಡಲು ಸಾಧ್ಯವಿಲ್ಲ ಎಂದು ಹೇಳಿರುವ ಸುದ್ದಿ ಬಿತ್ತರವಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೆ, ನೀವು ಹೇಗೆ ಶ್ರೀರಾಮ ಮಂದಿರದ ಲೆಕ್ಕ ಕೇಳಿದ್ದೀರೋ ಅದೇ ರೀತಿಯಲ್ಲಿ ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ ಖರ್ಗೆಯವರು ಆರ್‍ಎಸ್‍ಎಸ್ ಲೆಕ್ಕ ಕೇಳಿದ್ದಾರೆ ಅಷ್ಟೇ ಅದನ್ನು ಕೊಡೋಕೆ ನಿಮಗೆ ಯಾವ ತೊಂದರೆ ಎಂದು ಪ್ರಶ್ನಿಸಿದರು.
ಬಂಧಿತ ಟ್ರಸ್ಟ್‍ನ ಸದಸ್ಯರು ಬಿಜೆಪಿಯ ಕೋರ್ ಟೀಮ್ ಹಾಗೂ ಸಂಘ ಪರಿವಾರದ ನಿಷ್ಠೆಯ ಕಾರ್ಯಕರ್ತರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಮೋದಿಯವರ ನಿಷ್ಠಾವಂತ ಕಾರ್ಯಕರ್ತರು ಶ್ರೀರಾಮನಿಗೆ ಎಷ್ಟರ ಮಟ್ಟಿಗೆ ನಿಷ್ಠೆ ತೋರಿಸಿದ್ದಾರೆ ಎಂದು ಜನತೆ ಅರ್ಥ ಮಾಡಿಕೊಂಡು ಸರಿಯಾದ ಪಾಟ ಕಲಿಸಲಿದ್ದಾರೆ ಎಂದು ಹೇಳಿದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ನೀತಿ ಮತ್ತು ಸಂಶೋಧನಾ ಘಟಕ ಜಿಲ್ಲಾಧ್ಯಕ್ಷ ಹೆಚ್.ಎಸ್.ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್.ಇ.ಪ್ರಕಾಶ್, ಚಿಕ್ಕಮಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಲಾಕೇಶ್, ಯುವ ಕಾಂಗ್ರೆಸ್ ಮುಖಂಡರಾದ ಕುರುವಂಗಿ ರಾಜೇಶ್, ಶರತ್ ಉಪಸ್ಥಿತರಿದ್ದರು.



