ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ನೂತನ ಗೌರವ ಕಾರ್ಯದರ್ಶಿಯಾಗಿ ಶಿಕ್ಷಕ ಬಿ.ಆರ್. ನವೀನ್ ಅವರನ್ನು ನೇಮಕ ಮಾಡಲಾಗಿದೆ.
ಶನಿವಾರ ಸಂಜೆ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಅವರು ನವೀನ್ ಅವರಿಗೆ ನೂತನ ಗೌರವ ಕಾರ್ಯದರ್ಶಿ ನೇಮಕ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಸಂಚಾಲಕ ಹೆಚ್.ಎಂ. ಶಾಂತಕುಮಾರ್, ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಅಧ್ಯಕ್ಷ ಎಂ.ಎಸ್. ನಾಗರಾಜು, ಗೋಣಿಬೀಡು ಹೋಬಳಿ ಕಸಾಪ ಅಧ್ಯಕ್ಷ ನವೀನ್ ಆನೆದಿಬ್ಬ, ಕಸಾಪ ಪದಾಧಿಕಾರಿಗಳಾದ ಪ್ರಕಾಶ್ ಆರ್, ಕ್ಯಾಂಟೀನ್ ರಾಜಣ್ಣ, ಮಂಜುನಾಥ್ ಬೆಟ್ಟಗೆರೆ, ಶ್ರೀಮತಿ ಮಿಥುನಾ ನವೀನ್, ಶ್ರೀಮತಿ ವಿದ್ಯಾ ಶಶಿ ಉಪಸ್ಥಿತರಿದ್ದರು.

ಬಿ.ಆರ್. ನವೀನ್ ಅವರು ಮೂಡಿಗೆರೆ ಪಟ್ಟಣದ ಸಮೀಪ ಲೋಕವಳ್ಳಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದು, ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ನೌಕರರ ಸಂಘ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಯಾಗಿ ದುಡಿದಿದ್ದಾರೆ. ಮೂಡಿಗೆರೆ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಮೂಡಿಗೆರೆ ತಾಲ್ಲೂಕು ನೌಕರರ ಸಂಘ ಮತ್ತು ಶಿಕ್ಷಕರ ಸಂಘದ ನಿರ್ದೇಶಕರಾಗಿದ್ದಾರೆ.
ಇದೀಗ ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.



