ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡುತ್ತಿವೆ. ಇದರ ಅಂಗವಾಗಿ ಸಾವಯ ಕೃಷಿಯ ಕಡೆಗೆ ರೈತರನ್ನು ಸೆಳೆಯಲು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ.
ಸಾವಯವ ಕೃಷಿ ಮಾಡುತ್ತಿರುವ ರೈತರನ್ನು ಪ್ರೋತ್ಸಾಹಿಸಿ ಅಭಿನಂದಿಸುವ ಕಾರ್ಯ ನಡೆಯುತ್ತಿದೆ.
ಇದರ ಅಂಗವಾಗಿ ಇತ್ತೀಚೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಮೂಡಿಗೆರೆ ತಾಲ್ಲೂಕು ಕೊಲ್ಲಿಬೈಲ್ ಗ್ರಾಮದ ಹಿರಿಯ ಕೃಷಿಕ ಕೆ.ಹೆಚ್. ವೆಂಕಟೇಶ್ ಅವರ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾವಯವ ಕೃಷಿಯ ಕಡೆಗೆ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡಿರುವ ವೆಂಕಟೇಶ್ ಅವರ ಪುತ್ರ ಕೆ.ವಿ. ರಾಕೇಶ್ ಅವರ ಕಾರ್ಯವನ್ನು ಶ್ಲಾಘಿಸಿದರು. ರಾಕೇಶ್ ಅವರು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿ ಹಲವು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು. ಅತಿಯಾದ ರಾಸಾಯನಿಕಗಳ ಬಳಕೆಯಿಂದ ನಮ್ಮ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ರಾಸಾಯನಿಕಗಳ ಅವಲಂಬನೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರಾಸಾಯನಿಕ ಬಳಸಿದ ಆಹಾರ ಬಳಕೆಯಿಂದ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಸಾವಯವ ಕೃಷಿಕೆ ಹೆಚ್ಚಿನ ಮನ್ನಣೆ ನೀಡುತ್ತಿದೆ. ಯುವ ಕೃಷಿಕರು ಸಾವಯವ ಕೃಷಿಯ ಕಡೆಗೆ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಗ್ರಾಮದ ಹಿರಿಯರಾದ ಎನ್.ಎಲ್. ಪುಣ್ಯಮೂರ್ತಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಜೇಂದ್ರ ಟಿ.ಎಂ., ದೀಪಕ್ ದೊಡ್ಡಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



