ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ತನ್ನದೇಯಾದ ಇತಿಹಾಸವಿದೆ. ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಮುಖ್ಯವಾಹಿನಿ ಮಾಧ್ಯಮಗಳ ಸಂಪಾದಕರು ಮತ್ತು ಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಈ ನಡುವೆ ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳಿಗೆ ಹೋಗಿ ಪತ್ರಕರ್ತರ ಹೆಸರಿನಲ್ಲಿ ಹೆದರಿಸುವುದು, ಹಣ ಕೊಡದಿದ್ದರೆ RTI ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಬೆದರಿಸುವುದು ಹಾಗೂ ಪತ್ರಿಕೆಗಳಲ್ಲಿ ಅವರ ವಿರುದ್ಧ ಬರೆಯುವುದಾಗಿ ಬೆದರಿಸಿ ಹಣ ಕೇಳಿರುವ ದೂರುಗಳು ಕೂಡ ಬರುತ್ತಿವೆ. ಪೊಲೀಸ್ ಠಾಣೆಗಳಿಗೂ ಹೋಗಿ ಹಣ ಕೇಳಿರುವ ಉದಾಹರಣೆಗಳಿವೆ. ಪತ್ರಕರ್ತರ ಹೆಸರಿನಲ್ಲಿ ಹಣ ಕೇಳಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೂರು ನೀಡಲು ತಮ್ಮ ಇಲಾಖೆ ನೌಕರರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿಕ್ಕಮಗಳೂರು ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಸಾಕಷ್ಟು ವಾಹನಗಳಲ್ಲಿ ಪ್ರೆಸ್(PRESS) ಎಂಬ ಸ್ಟಿಕ್ಕರ್ ಅಂಟಿಸಿರುವುದನ್ನು ಕಾಣಬಹುದು. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧ ಇಲ್ಲದವರು PRESS ಸ್ಟಿಕ್ಕರ್ ಅಂಟಿಸಿಕೊಂಡು ಕಾನೂನು ಉಲ್ಲಂಘನೆ ಮತ್ತು ಕಾನೂನು ಬಾಹಿರ ಚಟುವಟಿಕೆ ನಡೆಸುವುದು ಕಂಡು ಬಂದಿದೆ. PRESS ಸ್ಟಿಕ್ಕರ್ ಕಂಡರೆ ಪೊಲೀಸರು ಪ್ರಶ್ನಿಸುವುದಿಲ್ಲ ಎಂಬ ಭಾವನೆ ಬೆಳೆದಿದೆ. ಆದ್ದರಿಂದ PRESS ಸ್ಟಿಕ್ಕರ್ ಅಂಟಿಸಿರುವ ವಾಹನಗಳನ್ನು ಸಂಚಾರ ಪೊಲೀಸರ ಮೂಲಕ ತಪಾಸಣೆಗೆ ಒಳಪಡಿಸಿ ನೈಜ ಪತ್ರಕರ್ತರಲ್ಲದ ವಾಹನಗಳಿಂದ ಸ್ಟಿಕ್ಕರ್ ತೆಗೆಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಮಿಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಅನಿಲ್ ಅನಂತ್ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಖಜಾಂಚಿ ಅಕ್ಷಯ್ ಕುಮಾರ್, ಕುಮಾರ್, ಉಮೇಶ್, ಸೋಮಶೇಖರ್, ಅನ್ನಪೂರ್ಣ, ಕಿಶೋರ್, ಸಚಿನ್, ರೋಹಿತ್ ಉಪಸ್ಥಿತರಿದ್ದರು.



