ಧಾರಾಕಾರ ಗಾಳಿಮಳೆಗೆ ಚಾರ್ಮಾಡಿ ಘಾಟ್ ನ ಬಿದಿರುತಳ ಸಮೀಪ ಮಂಗಳವಾರ ಬಂಡೆ, ಮರ ಕುಸಿದಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಚಾರ್ಮಾಡಿ ಘಾಟ್ ನ ಆಲೇಕಾನ್ ಸಮೀಪ ಧರೆ ಕುಸಿಯತೊಡಗಿದ್ದು ಚಾರ್ಮಾಡಿ ಘಾಟ್ ಸಂಚಾರ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಸಮಾಜಸೇವಕ ಆರೀಪ್ ಅವರ ತಂಡ ಚಾರ್ಮಾಡಿ ಘಾಟ್ ನ ಬಿದಿರುತಳ ಸಮೀಪ ರಸ್ತೆಗೆ ಬಿದ್ದಿದ್ದ ಬಂಡೆ ಮತ್ತು ಮರವನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಚಾರ್ಮಾಡಿ ಘಾಟ್ ನ ಮಲಯಮಾರುತ ಸಮೀಪ ಮೈಸೂರು ಮೂಲದ ಕಾರೊಂದು ಗಾಳಿಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದು ಕಾರ್ಯಾಚರಣೆ ನಡೆಸಿ ಕಾರನ್ನು ಮೇಲೆತ್ತಲ್ಲಾಯಿತು.
ಬೆಟ್ಟಗೆರೆ ಗ್ರಾಮದ ದೇವಮ್ಮ, ಬಡವನದಿಣ್ಣೆಯ ಪೂರ್ಣೇಶ್, ಬಾಳೂರು ಹೊರಟ್ಟಿಯ ದಯಾಕರ್ ಎಂಬುವವರ ಮನೆಯ ಮೇಲೆ ಬೃಹದಾಕಾರದ ಮರ ಬಿದ್ದು ಮನೆಯ ಮೇಲ್ಛಾವಣಿ ಹಾನಿಯಾಗಿದೆ.

ಕೊಟ್ಟಿಗೆಹಾರದಲ್ಲಿ ಹೆದ್ದಾರಿ ಬದಿಯ ಚರಂಡಿ ಹೂಳು ಕಸ ತುಂಬಿ ಮಳೆ ನೀರು ರಸ್ತೆಯಲ್ಲಿ ಹರಿಯತೊಡಗಿದ್ದು ತರುವೆ ಗ್ರಾ.ಪಂ ಅಧ್ಯಕ್ಷ ರಘು ಅವರ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಚರಂಡಿಯನ್ನು ಸರಿಪಡಿಸಲಾಯಿತು.


ಕೊಟ್ಟಿಗೆಹಾರದಲ್ಲಿ ಸೋಮವಾರ 235 ಮಿ.ಮಿ ಮಳೆಯಾಗಿದ್ದು ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಬಣಕಲ್ ಕೊಟ್ಟಿಗೆಹಾರ ಭಾಗದಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಕೊಟ್ಟಿಗೆಹಾರ ಸುತ್ತಮುತ್ತಲಿನ ಜನರು ಕತ್ತಲಿನಲ್ಲಿ ಕಳೆಯುವಂತಾಗಿದೆ.



