ದಿನಾಂಕ 08.07.2026 ರಂದು ಬೆಳೆಗಾರರ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಮಾಡಿ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಅವರು ; ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಯಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಈ ಸಂದರ್ಭದಲ್ಲಿ ಬೆಳೆಗಾರರ ನಿಯೋಗವು ಅಭಿನಂದಿಸಿ ನಂತರ ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಬಿ.ಎಸ್. ಜಯರಾಂ ಅವರು ಮುಖ್ಯಮಂತ್ರಿಗೆ ವಿವರಣೆ ನೀಡಿದರು.
ಪ್ರಮುಖವಾಗಿ ಕಂದಾಯ ಭೂಮಿ, ಅರಣ್ಯ ಭೂಮಿಯ ಬಗ್ಗೆ ಮತ್ತು ನಮೂನೆ50, 53ರ ಭೂ ಮಂಜೂರಾತಿಯಲ್ಲಿನ ಹಗರಣದಲ್ಲಿ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ 5ಗುಂಟೆ, 10ಗುಂಟೆ, ಹೀಗೆ ಅತ್ಯಂತ ಕಡಿಮೆ ಭೂಮಿ ಅನಧಿಕೃತ ಸಾಗುವಳಿ ಮಾಡಿರುವ ಸಾಕಷ್ಟು ಬಡ ರೈತರ ಅರ್ಜಿಗಳನ್ನು ಸರ್ಕಾರ ವಜಾ ಮಾಡಿರುವುದರಿಂದ ಬಹಳ ತೊಂದರೆ ಆಗಿರುತ್ತದೆ ಎಂದು ತಿಳಿಸಿದರು.ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸಭೆಯೊಂದರಲ್ಲಿ ಪಾಲ್ಗೊಂಡು ಸಲಹೆ ನೀಡಲು ಅವಕಾಶ ಕಲ್ಪಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.
ಪಟ್ಟಣ ಪಂಚಾಯಿತಿ ,ಪುರಸಭೆ, ನಗರಸಭೆ ಪರಿಮಿತಿಯಿಂದ 3 -5 ಕಿ.ಮೀ ಭಾಗದ ಜಮೀನುಗಳನ್ನು ನಗರಸಭೆ,ಪುರಸಭೆ ,ಪಟ್ಟಣ ಪಂಚಾಯತಿ ವ್ಯಾಪ್ತಿ ಪರಿಮಿತಿಗೆ ಹೊಂದಿಕೊಂಡಿರುವ ಗ್ರಾಮಾಂತರ ಭಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ಲಾಂಟೇಶನ್ ಮತ್ತು ಇತರ ಬೆಳೆಗಳ ಜಮೀನುಗಳನ್ನು ಬಫರ್ ಜೋನ್ ವ್ಯಾಪ್ತಿಯಿಂದ ಹೊರಗಿರುವಂತೆಯೂ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ಅನಂತು ಮಾತನಾಡಿ ತುಂಡುಭೂಮಿ ಕಾನೂನು ಕಾಯ್ದೆ ವಾಪಸ್ ಪಡೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಅಂದರೆ, ಐದು ಕಾಲು ಗುಂಟೆ ಜಮೀನನ್ನು ಮಾತ್ರ ರಿಜಿಸ್ಟರ್ ಮಾಡಲು ಸರ್ಕಾರದಿಂದ ಕಾನೂನು ತಿದ್ದುಪಡಿ ಮಾಡಿದ್ದು ಇದರಿಂದ ಮನೆ ಕಟ್ಟಿಕೊಳ್ಳಲುಒಂದು ಗುಂಟೆ, ಎರೆಡು ಗುಂಟೆ ಭೂಮಿ ಖರೀದಿ ಮಾಡಲು ಇಚ್ಚಿಸುವ ನಿವೇಶನ ರಹಿತರಿಗೆ ಅನಾನುಕೂಲವಾಗುತ್ತಿದೆ. ಈ ಕಾಯ್ದೆಗೆ ತಿದ್ದುಪಡಿ ತಂದು ಬಡವರಿಗೆ ಅನುಕೂಲವಾಗುವ ಕಾನೂನು ರೂಪಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಕಂದಾಯ ಸಚಿವರು ಹಾಗೂ ಬೆಳೆಗಾರರ ಸಂಘಟನೆಗಳನ್ನು ಕರೆದು ಮುಂದಿನ ಮಂತ್ರಿ ಮಂಡಲ ಪುನರ್ ರಚನೆಯಾದ ನಂತರ ದಿನಾಂಕವನ್ನು ನಿಗದಿಪಡಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿರುತ್ತಾರೆ. ನಿಯೋಗವು ನೂತನವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ಕೆ. ಹರಿಪ್ರಸಾದ್ ರವರನ್ನೂ ಕೂಡ ಗೌರವಿಸಿ ಅಭಿನಂದಿಸಿದೆ ಎಂದು ಬಿ.ಎಸ್. ಜಯರಾಂ ಅವರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ ಬಿ ನಿಂಗಯ್ಯ, ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು, ಮುಖಂಡರಾದ ಜಿ.ಹೆಚ. ಹಾಲಪ್ಪ ಗೌಡ, ಎಂ ಪಿ ಮನು ರವರು, ಡಿ.ಕೆ ಉದಯಶಂಕರ್, ಹೆಚ್ ಜಿ ಸುರೇಂದ್ರ, ಸಿ ಕೆ ಇಬ್ರಾಹಿಂ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.


