ಇತ್ತೀಚಿಗೆ ಅತಿ ಹೆಚ್ಚು ಪ್ರಕೃತಿ ನಾಶವಾಗುತ್ತಿರುವುದರಿಂದ ನಮ್ಮ ಮುಂದಿನ ಪೀಳಿಗೆ ದೊಡ್ಡ ಸಮಸ್ಯೆ ಎದರಿಸಬೇಕಾಗುತ್ತದೆ ಎಂದು ರೋಟರಿ ಸಂಸ್ಥೆಯ ಪಾಸ್ಟ್ ಜೋನಲ್ ಲೆಫ್ಟಿನೆಂಟ್ ಆದರ್ಶ್ ಹೇಳಿದರು
ಅವರು ಮಂಗಳವಾರ ಮೂಡಿಗೆರೆ ತಾಲ್ಲೂಕು ಹಳಿಕೆ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಪರಿಸರವಿದ್ದರೆ ಮಾತ್ರ ಮಾನವ ಸೇರಿದಂತೆ ಎಲ್ಲಾ ಜೀವಜಂತುಗಳು ಬದುಕಲು ಸಾಧ್ಯವಾಗುತ್ತದೆ. ಆದರೆ ಮಾನವ ತನ್ನ ಸ್ವಾರ್ಥಕ್ಕಾಗಿ ಮರಗಳನ್ನು ಕಡಿಯುವುದರಿಂದ ಪ್ರಕೃತಿ ಮುನಿಸಿಕೊಂಡಿದ್ದು, ಪ್ರಕೃತಿಯಲ್ಲಿ ಅಸಮತೋಲನೆಯಾಗುತ್ತಿದೆ. ಹಾಗಾಗಿ ಪರಿಸರ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, 1 ಮರ ಕಡಿದರೆ ಕನಿಷ್ಟ 2 ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಜತೆಗೆ ಯುವ ಜನತೆಗೆ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಹೆಚ್ಚಾಗಿ ನಡೆಯಬೇಕಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಃ ಬಿ.ಕೆ.ದಿನೇಶ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹೆಚ್ಚಾಗಿ ಹಾಳಾಗುವ ಜತೆಗೆ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣವಾಗಬೇಕೆಂದು ಹೇಳಿದರು.
ರೋಟರಿ ಕಾರ್ಯದರ್ಶಿ ಹೆಚ್.ಬಿ. ಸಂತೋಷ್, ನಿಕಟ ಪೂರ್ವ ಅಧ್ಯಕ್ಷ ಹೆಚ್.ಎನ್. ಪ್ರಸಾದ್, ಸಂದೀಪ್, ಸುಭಾಷ್, ಅವಿನ್, ಸುನಿಲ್, ಶಾಲೆಯ ಮುಖ್ಯ ಶಿಕ್ಷಕ ಮಂಜು ನಾಯ್ಕ್, ರೇಣುಕಮ್ಮ ಉಪಸ್ಥಿತರಿದ್ದರು.


