ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಶಿಲದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೈರಾಪುರದವರೆಗಿನ ಪ್ರಸ್ತಾವಿತ ರಸ್ತೆಗೆ ಗುರುವಾರ ಜಂಟಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಜೇಕಬ್ ಎಲ್. ಅವರ ಸೂಚನೆ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ PMGSY ಮತ್ತು PM-ಜನಮನ್ ಯೋಜನೆಯಡಿ ಅನುಮತಿ ಕೋರಿ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಯಿತು.
ಚಿಕ್ಕಮಗಳೂರು ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಶಿಶಿಲ ಭಾಗದಲ್ಲಿ ಪ್ರಸ್ತಾವಿತ ರಸ್ತೆಯ ಸ್ಥಳ ಪರಿಶೀಲನೆ ನಡೆಸಿದರು. ನಂತರ ಶಿಶಿಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಸ್ಥಳಿಯರೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರು ಈ ಹಿಂದಿನಿಂದಲೂ ಶಿಶಿಲ ಬೈರಾಪುರ ನಡುವೆ ಕಚ್ಚಾ ರಸ್ತೆಯಿದ್ದು, ಈ ರಸ್ತೆಯ ಮೂಲಕವೇ ಘಟ್ಟದ ಮೇಲೆ ಮತ್ತು ಕೆಳಗಿನ ಜನರು ಸಂಚಾರ ನಡೆಸುತ್ತಿದ್ದರು. ಇದೀಗ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಈಗ ಇದೇ ಮಾರ್ಗವಾಗಿ ನೂತನವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪಕ್ಕಾರಸ್ತೆ ನಿರ್ಮಿಸಿದರೆ ಬಹಳಷ್ಟು ಅನುಕೂಲವಾಗಲಿದೆ.
ಭಾಗದ ಬುಡಕಟ್ಟು ಸಮುದಾಯದ ಜನರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಈ ರಸ್ತೆ ನಿರ್ಮಾಣವಾದರೆ ಅವರ ಆರೋಗ್ಯ, ಶಿಕ್ಷಣ ಮತ್ತು ಮಾರುಕಟ್ಟೆ ಸಂಪರ್ಕಕ್ಕೆ ಅನುಕೂಲವಾಗಲಿದೆ.
ಧರ್ಮಸ್ಥಳ ಮತ್ತು ಲಕ್ಷದೀಪೋತ್ಸವಕ್ಕೆ ತೆರಳುವ ಲಕ್ಷಾಂತರ ಭಕ್ತರಿಗೆ ಈ ರಸ್ತೆ ಬಹಳ ಮುಖ್ಯವಾಗಿದೆ. ಈ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನಡುವಿನ ಅಂತರ ಕಡಿಮೆಯಾಗಿ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಅನುಕೂಲವಾಗಲಿದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ನಡುವೆ ಸಂಪರ್ಕದಿಂದ ಈಗಿರು ರಸ್ತೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ನಿವೃತ್ತ ಇಂಜಿನಿಯರ್ ಮತ್ತು ಈ ಯೋಜನೆಯ ಬಗ್ಗೆ ಹೆಚ್ಚು ಅಧ್ಯಯನ ನಡೆಸಿರುವ ಹೆಚ್.ಎಂ. ಶಿವಪ್ರಕಾಶ್ ಹ್ಯಾರಗುಡ್ಡೆ, ಗೃಹ ಮಂಡಳಿ ಮಾಜಿ ಅಧ್ಯಕ್ಷ ಜಿ.ಹೆಚ್. ಹಾಲಪ್ಪಗೌಡ, ರೈತ ಹಿತರಕ್ಷಣೆ ವೇದಿಕೆ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಬಿ.ಕೆ. ಲಕ್ಷ್ಮಣಕುಮಾರ್, ಮುಖಂಡರಾದ ಸುಮಿತ್ರೆಗೌಡ ಬೈರಾಪುರ, ಮೈದಿನ್, ಸುಂದರ್ ಪದ್ಮನಾಭ ಮುಂತಾದವರು ಅಧಿಕಾರಿಗಳಿಗೆ ಸಾಥ್ ನೀಡಿದರು.
ಜಂಟಿ ಪರಿಶೀಲನಾ ವರದಿಯನ್ನು PMGSY-4 ಅಥವಾ ರಾಜ್ಯ ಸರ್ಕಾರದ ಯೋಜನೆಯಡಿ ಅನುಮೋದನೆಗಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



