ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್, ಎಸ್ಸೀ ಹಾಗೂ ಎಸ್ಟಿ ಘಟಕದ ಮುಖಂಡರು ಸೋಮವಾರ ಮೂಡಿಗೆರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಅಶ್ವಿನಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಕುನ್ನಳ್ಳಿ ಮಾತನಾಡಿ, ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ದೇಶದಲ್ಲಿ ಜಾತಿ ವ್ಯವಸ್ಥೆ ನಿಯಂತ್ರಣಕ್ಕೆ ಬಾರದಿರುವುದು ದೊಡ್ಡ ದುರಂತ. ಈ ಕಾರಣದಿಂದ ಆ.8ರಂದು ಉತ್ತರಖಾಂಡಾದ ರಾಮಲೀಲಾ ಮೈಧಾನದಲ್ಲಿ ಏರ್ಪಸಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಅಲ್ಲಿನ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಯ ಸಂಘಟನೆ ಮುಖಂಡರು ಗೋಮೂತ್ರ ಹಾಗೂ ಸಗಣಿ ಹಾಕಿ ಶುದ್ಧಿಕರಣ ಮಾಡಿರುವುದು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಇಂತಹ ಹೀನಾಯ ಕೃತ್ಯ ಮುಂದೆಂದೂ ಆಗದಂತೆ, ಈ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಕಾಂಗ್ರೆಸ್ ಎಸ್ಸೀ ಘಟಕದ ಅಧ್ಯಕ್ಷ ಸುಧೀರ್ ಚಕ್ರಮಣಿ, ಎಸ್ಟಿ ಘಟಕದ ಅಧ್ಯಕ್ಷ ಹರೀಶ್ ಸಬ್ಬೇನಹಳ್ಳಿ, ಕಾಂಗ್ರೆಸ್ ಕಸಬಾ ಹೋಬಳಿ ಅಧ್ಯಕ್ಷ ರಘು, ಬಣಕಲ್ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯ, ಕೆಡಿಪಿ ಸದಸ್ಯ ಸುರೇಂದ್ರ ಉಗ್ಗೇಹಳ್ಳಿ, ನಗರ ಅಧ್ಯಕ್ಷ ಸುರೇಶ್ ಜೈನ್, ಜಗದೀಶ್, ವಿನಯ್, ಪೂವಪ್ಪ, ಸುರೇಶ್, ಗಣೇಶ್ ಮತ್ತಿತರರಿದ್ದರು.


