ಹಾಸನದಿಂದ ಮೂಡಿಗೆರೆಗೆ ರಾತ್ರಿ 10 ಗಂಟೆಯ ನಂತರ ಬಸ್ ಸೌಲಭ್ಯ ಇಲ್ಲದಿರುವ ಕುರಿತು ಹಾಗೂ ರಾತ್ರಿ 10 ಗಂಟೆಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಭಿಷೇಕ್ ಕೋಳೂರು ಮನವಿ ಸಲ್ಲಿಸಿದ್ದಾರೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಹಾಸನದಿಂದ ಮೂಡಿಗೆರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ರಾತ್ರಿ 10:00 ಗಂಟೆಯಿಂದ 1:30 ಗಂಟೆಯವರೆಗೆ ಯಾವುದೇ ನೇರ ಬಸ್ ಸೌಲಭ್ಯ ಇರುವುದಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಪ್ರಯಾಣಿಕರಿಗೆ ತೀವ್ರ ಅನಾನುಕೂಲವಾಗುತ್ತಿದೆ.
ಬೆಂಗಳೂರಿನಿಂದ ಹಾಸನಕ್ಕೆ ರಾತ್ರಿ 9:00 ಗಂಟೆ ಮತ್ತು 9:30 ಗಂಟೆಗೆ ರೈಲು ಸೌಲಭ್ಯ ಇರುವುದರಿಂದ ಅನೇಕ ಪ್ರಯಾಣಿಕರಿಗೆ ಇದು ಅನುಕೂಲಕರವಾಗಿದೆ. ಆದರೆ, ರಾತ್ರಿ 9:30ರ ರೈಲಿನಲ್ಲಿ ಹಾಸನಕ್ಕೆ ತಲುಪುವ ಪ್ರಯಾಣಿಕರಿಗೆ ನಂತರ ಮೂಡಿಗೆರೆಗೆ ತೆರಳಲು ಸೂಕ್ತವಾದ ಬಸ್ ಸೌಲಭ್ಯ ಇರುವುದಿಲ್ಲ.
ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಚಿಕ್ಕಮಗಳೂರು ಮಾರ್ಗವಾಗಿ ಸುತ್ತಿ ಮೂಡಿಗೆರೆಗೆ ಪ್ರಯಾಣಿಸಬೇಕಾಗುತ್ತದೆ. ಇದರಿಂದ ಹೆಚ್ಚುವರಿ ಹಣ ಖರ್ಚಾಗುವುದರ ಜೊತೆಗೆ ಹೆಚ್ಚಿನ ಸಮಯವೂ ವ್ಯರ್ಥವಾಗುತ್ತದೆ.
ಅದೇ ರೀತಿ, ಹಾಸನ-ಮೂಡಿಗೆರೆ ಮಾರ್ಗದಲ್ಲಿ ಮಧ್ಯಂತರ ಸ್ಥಳಗಳಲ್ಲಿ ಇಳಿಯಬೇಕಾದ ಪ್ರಯಾಣಿಕರಿಗೆ ರಾತ್ರಿ ಸಮಯದಲ್ಲಿ ಸೂಕ್ತವಾದ ಬಸ್ ಸೌಲಭ್ಯ ಇಲ್ಲದಿರುವುದರಿಂದ ಕೆಲವೊಮ್ಮೆ ಚಾಲಕರು ಅಥವಾ ನಿರ್ವಾಹಕರ ಬಳಿ ವಿನಂತಿಸಿ ಬಸ್ ನಿಲ್ಲಿಸುವಂತೆ ಕೇಳಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬಸ್ ನಿಲ್ಲಿಸಲು ಸಾಧ್ಯವಾಗದ ಕಾರಣ, ಪ್ರಯಾಣಿಕರು ಅನಿವಾರ್ಯವಾಗಿ ಸ್ವಂತ ವಾಹನ ಅಥವಾ ದುಬಾರಿ ಆಟೋ/ಬಾಡಿಗೆ ವಾಹನಗಳನ್ನು ಅವಲಂಬಿಸಬೇಕಾಗುತ್ತದೆ.
ಇದರಿಂದ ರಾತ್ರಿ ಸಮಯದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲ ಹಾಗೂ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ.
ಆದ್ದರಿಂದ, ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ದಯವಿಟ್ಟು ಈ ವಿಷಯವನ್ನು ಪರಿಶೀಲಿಸಿ ಹಾಸನದಿಂದ ಮೂಡಿಗೆರೆಗೆ ರಾತ್ರಿ 10:00 ಗಂಟೆಯ ಸುಮಾರಿಗೆ ಒಂದು ಬಸ್ ಸೇವೆಯನ್ನು ಪ್ರಾರಂಭಿಸುವಂತೆ, ಸಾರ್ವಜನಿಕರ, ವಿಶೇಷವಾಗಿ ಗ್ರಾಮೀಣ ಮತ್ತು ಬಡ ಪ್ರಯಾಣಿಕರ ಅನುಕೂಲಕ್ಕಾಗಿ ಈ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಭಿಷೇಕ್ ಅವರು ಕೋರಿದ್ದಾರೆ.


