ಕನ್ನಡ ಸಾಹಿತ್ಯ ಲೋಕದಲ್ಲಿ ಎರಡೂವರೆ ದಶಕಗಳಿಂದ ಕ್ರಿಯಾಶೀಲ ಕವಯಿತ್ರಿಯಾಗಿ ‘ ಸಿರಿ ಮಲ್ಲಿಗೆ ‘ , ‘ ಸಾಲು ದೀಪಗಳು’ ಕವನಸಂಕಲನಗಳನ್ನು ಲೋಕಾರ್ಪಣೆ ಗೊಳಿಸಿ ಹೆಸರಾಗಿರುವ ಶ್ರೀಮತಿ ಬಿ.ಎಂ.ಪ್ರಮೀಳ ಮಹದೇವ್ ಅವರು ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಆಯ್ಕೆಯಾಗಿ ಕವನ ವಾಚಿಸಲಿದ್ದಾರೆ.
ಮೂಡಿಗೆರೆ ತಾಲ್ಲೂಕು ಬೈದುವಳ್ಳಿ ಇವರ ತವರು ಮನೆ. ಪ್ರಮೀಣ ಈಗಾಗಲೇ ತಾಲ್ಲೂಕು ಮಟ್ಟದ, ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ. ಇವರಿಗೆ ನಾಡಿನ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇವರ ಲೇಖನಗಳು, ಕವನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಸಹೃದಯರ ಪ್ರಶಂಸೆಗೆ ಪಾತ್ರವಾಗಿವೆ.
ಆದರ್ಶ ಶಿಕ್ಷಕಿಯಾಗಿ ಪ್ರಾಂಜಲ ಸೇವೆ ಸಲ್ಲಿಸುತ್ತಿರುವ ಇವರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಪುರಸ್ಕಾರವಾಗಿವೆ.
ಜನಪ್ರಿಯ ಜಾನಪದ ಹಾಡುಗಾರ್ತಿಯಾಗಿಯೂ ಅಭಿನಂದಿತರಾಗಿರುವ ಇವರು ರಾಜ್ಯಮಟ್ಟದ ಜಾನಪದ ಸಮ್ಮೇಳನಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆದಿದ್ದಾರೆ.
ಇದೀಗ ‘ ಅಗ್ನಿಶಿಖೆ’ ಹಾಗು ‘ಜಾನಪದ ದೀವಿಗೆ’ ಪುಸ್ತಕಗಳನ್ನು ಹೊರತರುತ್ತಿರುವ ಈ ಸುಸಂದರ್ಭದಲ್ಲಿ ಶ್ರೀಮತಿ ಬಿ.ಎಂ.ಪ್ರಮೀಳ ಮಹದೇವ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸುತ್ತಿದ್ದಾರೆ.


