ಆಲ್ದೂರು ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಯಲಗುಡಿಗೆ ಗ್ರಾಮದ ಹರವಿನಗಂಡಿಯಲ್ಲಿ ಉದ್ಭವ ಭೈರವೇಶ್ವರ ಸ್ವಾಮಿ ನೆಲೆಸಿದ್ದು, ಮಹಾ ನವಮಿ ಅಂಗವಾಗಿ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಗುರುವಾರ ನಡೆಯಿತು.
ಆಯುಧ ಪೂಜೆ ಅಂಗವಾಗಿ ದೇವಸ್ಥಾನದ ಪೂಜಾ ಪರಿಕರಗಳಿಗೆ ಸಾಂಪ್ರದಾಯಿಕ ಪೂಜೆ, ಹೂವಿನ ಅಲಂಕಾರ, ಮರುದಿನ ಬೆಟ್ಟದ ತಪ್ಪಲಿ ನಲ್ಲಿ ಅಂಬು ಹೊಡೆಯುವುದು, ವಾದ್ಯ ಮೇಳಕ್ಕೆ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಕುಣಿಸುವುದು, ಮರುದಿನ ಬೆಳಗ್ಗೆ ಶ್ರೀ ಭೈರವೇಶ್ವರ ಸ್ವಾಮಿಗೆ ಅಷ್ಟೋತ್ತರ, ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಮಧ್ಯಾಹ್ನ ಭೈರವೇಶ್ವರ ಸ್ವಾಮಿಗೆ ಹಾಗೂ ಭೂತಪ್ಪ ದೇವರುಗಳಿಗೆ ಕೆಂಡೋತ್ಸವ ನಡೆಯಿತು. ಆಗಮಿಸಿದ ಸಾವಿರಾರು ಭಕ್ತರಿಗೆ ತೀರ್ಥ ಪ್ರಸಾದ, ಮಹಾದಾಸೋಹ ನಡೆಯಿತು.
ಯಲಗುಡಿಗೆ, ಸತ್ತಿಹಳ್ಳಿ, ಮಾಚಗೊಂಡನಹಳ್ಳಿ, ಕೆಳಗೂರು, ಆಲ್ದೂರು, ಸುತ್ತಮುತ್ತಲಿನ ಸದ್ಭಕ್ತರು ಆಗಮಿಸಿದ್ದರು.


