ಚಿಕ್ಕಮಗಳೂರು ದತ್ತಪೀಠದಲ್ಲಿ ಮೂರು ದಿನಗಳ ಕಾಲ ನಡೆಯಲಿರೋ ದತ್ತಜಯಂತಿಗೆ ಸಂಭ್ರಮದ ಚಾಲನೆ ದೊರಕಿದೆ. ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ದತ್ತ ಜಯಂತಿ ಅಂಗವಾಗಿ ನಿನ್ನೆ ಹಮ್ಮಿಕೊಳ್ಳಲಾದ ಅನಸೂಯ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆಯಲ್ಲಿ ಸಹಸ್ರಾರು ಮಹಿಳೆಯರು ಪಾಲ್ಗೊಂಡರು.
ಬೆಳಗ್ಗೆ ಶ್ರೀ ಬೋಳರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಕೀರ್ತನಾ ಯಾತ್ರೆ ಆರಂಭಿಸಲಾಯಿತು. ಹೆಣ್ಣು ಮಕ್ಕಳು, ಚಿಣ್ಣರು ಕಂಸಾಳೆ ಬಾರಿಸುತ್ತಾ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಎಂಟು ಸಾವಿರಕ್ಕೂ ಅಧಿಕ ಮಹಿಳೆಯರು ಸಂಭ್ರಮದಿಂದ ಭಾಗವಹಿಸಿದ್ದರು. ದಾರಿಯುದ್ಧಕ್ಕೂ ದೇವರ ಸಂಕೀರ್ತನೆಗಳನ್ನು ಹಾಡಿದರು. ಮೆರವಣಿಗೆ ಬಳಿಕ ದತ್ತಪೀಠಕ್ಕೆ ತೆರಳಿದ ಮಹಿಳೆಯರು ಹಾಗೂ ಭಕ್ತರು ದತ್ತಪಾದುಕೆಯ ದರ್ಶನ ಪಡೆದರು.
ಶಾಸಕ ಸಿ.ಟಿ.ರವಿಯವರು ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು, ಬಿ.ಜೆ.ಪಿ. ಕಾರ್ಯಕರ್ತರು ಸಂಕೀರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಇದೇ ಮೊದಲ ಬಾರಿಗೆ ಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಇದು ಭಕ್ತರಿಗೆ ಹೊಸ ಹುಮ್ಮಸ್ಸು ನೀಡಿತ್ತು.



