ಭೂ ಒತ್ತುವರಿಯನ್ನು ಬೆಳೆಗಾರರಿಗೆ ಗುತ್ತಿಗೆಗೆ ನೀಡುವ ಕರ್ನಾಟಕ ಭೂ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಇವರ ಕಾರ್ಯವನ್ನು ಸ್ವಾಗತಿಸುವುದಾಗಿ ಬಿ.ಜೆ.ಪಿ. ರಾಷ್ಟ್ರೀಯ ಕಿಸಾನ್ ಮೋರ್ಚಾ ಸದಸ್ಯ ದಿನೇಶ್ ದೇವರುಂದ ತಿಳಿಸಿದರು.
ಅವರು ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಅದನ್ನು ಬೆಳೆಗಾರರಿಗೂ ಅನ್ವಯಿಸಬೇಕು ಎಂಬ ದೃಷ್ಟಿಯಿಂದ ಒತ್ತುವರಿಯನ್ನು ಬೆಳೆಗಾರರಿಗೆ ಗುತ್ತಿಗೆಗೆ ನೀಡುವ ಕರ್ನಾಟಕ ಭೂ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ.
ಈಗಾಗಲೇ ಹವಾಮಾನ ವೈಪರೀತ್ಯ, ಕಾಡುಪ್ರಾಣಿಗಳ ಹಾವಳಿ, ಕಾರ್ಮಿಕ ಸಮಸ್ಯೆಯ ನಡುವೆ ತತ್ತರಿಸಿರುವ ರೈತರು ಒತ್ತುವರಿಯನ್ನು ಯಾವ ಸಂದರ್ಭದಲ್ಲಿ ಬೇಕಾದರೂ ತೆರವುಗೊಳಿಸಬಹುದು ಎಂಬ ಮನಸ್ಥಿತಿಯಲ್ಲಿ ಒತ್ತುವರಿ ಜಮೀನಿಗೆ ಯಾವುದೇ ಕೆಲಸಗಳನ್ನು ಸರಿಯಾಗಿ ನಿರ್ವಹಿಸದೇ ಪಾಳುಬಿಡುವ ಸ್ಥಿತಿ ಉಂಟಾಗಿತ್ತು. ಈ ಕಾರಣದಿಂದ ಕನಿಷ್ಟ ಆದಾಯ ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಸರ್ಕಾರ ಗುತ್ತಿಗೆ ನೀಡುವ ವಿದೇಯಕ ಮಂಡನೆಯಿಂದಾಗಿ ಒತ್ತುವರಿ ತೆರವು ಚಿಂತೆಯಿಲ್ಲದೇ ತಮ್ಮ ಭೂಮಿಯನ್ನು ಉತ್ತಮ ರೀತಿಯಲ್ಲಿ ಸಾಗುವಳಿ ಮಾಡಿ ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ. ಅಲ್ಲದೇ ಸುತ್ತಮುತ್ತಲ ಕಾರ್ಮಿಕರಿಗೂ ಹೆಚ್ಚಿನ ದುಡಿಮೆಯಾಗಲಿದೆ. ಆರ್ಥಿಕ ಚಟುವಟಿಕೆ ಹೆಚ್ಚಾಗಿ ಒಟ್ಟಾರೆ ಅಭಿವೃದ್ಧಿಗೆ ಹೆಚ್ಚಿನ ಚಾಲನೆ ದೊರೆದಂತಾಗಿದೆ.
ಇದು ಬೆಳೆಗಾರರ ಆರ್ಥಿಕ ಅಭಿವೃದ್ದಿಗೆ ಕಾರಣವಾಗಲಿದ್ದು ಇದಕ್ಕೆ ಸಹಕಾರ ನೀಡಿದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶಾಸಕರಾದ ಬೆಳ್ಳಿಪ್ರಕಾಶ್, ಎಂ.ಪಿ. ಕುಮಾರಸ್ವಾಮಿ, ಡಿ.ಕೆ. ಸುರೇಶ್ ಇವರ ಸಹಕಾರವನ್ನು ಬೆಳೆಗಾರರ ಪರವಾಗಿ ಸ್ಮರಿಸುತ್ತಿದ್ದೇವೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಜೆ.ಎಸ್. ರಘು, ವಕ್ತಾರ ನಯನ ತಳವಾರ ಇದ್ದರು.






