ಮಾಜಿ ಕೇಂದ್ರ ಸಚಿವೆ ಶ್ರೀಮತಿ ಮೇನಕಾಗಾಂಧಿಯವರ ಪತ್ರದ ಮೇರೆಗೆ ಬಂದೂಕು ವಶಪಡಿಸಿಕೊಳ್ಳಲು ಹಾಸನ ಜಿಲ್ಲಾಧಿಕಾರಿಗಳು ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರಿಗೆ ನೋಟಿಸ್ ಜಾರಿಮಾಡಿದ್ದಾರೆ. ಈ ವಿಚಾರವಾಗಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಹೆಚ್.ಎಂ. ವಿಶ್ವನಾಥ್ ಅವರ ಬೆಂಬಲಕ್ಕೆ ನಿಂತಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ.ಎನ್. ಸುಬ್ರಮಣ್ಯ ಮತ್ತು ಗೌರವ ಕಾರ್ಯದರ್ಶಿ ಎಂ.ಬಿ. ರಾಜೀವ್ ; ಸಕಲೇಶಪುರ ತಾಲ್ಲೂಕು ಬಾಗೆ ಪಂಚಾಯತಿ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ವಿಚಾರವಾಗಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿ ಸಕಲೇಶಪುರ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್‍ರವರು ಕಾಡಾನೆ ಸಮಸ್ಯೆಯಿಂದ ಮಲೆನಾಡು ಭಾಗದ ರೈತಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ತೊಂದರೆ ಬಗ್ಗೆ ಅಧಿಕಾರಿಗಳಿಗೆ ವಿವರಿಸುತ್ತಿದ್ದರು.
ಮಲೆನಾಡು ಭಾಗದಲ್ಲಿ ಸುಮಾರು 2 ದಶಕಗಳಿಂದ ಪ್ರಾಣಹಾನಿ ಹಾಗೂ ಬೆಳೆನಷ್ಟ ಆಗುತ್ತಿದೆ ಎಂದು ಬೆಳೆಗಾರರ ಪರವಾಗಿ ಮಾತನಾಡುವ ಸಂದರ್ಭದಲ್ಲಿ ಕಾಡಾನೆಗಳು ನನ್ನ ಸ್ವಂತ ತೋಟಕ್ಕೆ ಬಂದಾಗ ನನಗೇನಾದರು ಪ್ರಾಣಕ್ಕೆ ತೊಂದರೆಯಾಗುವ ಸಂದರ್ಭ ಬಂದರೆ ನನ್ನ ಪ್ರಾಣರಕ್ಷಣೆಗಾಗಿ ಗುಂಡು ಹಾರಿಸಬೇಕಾಗುತ್ತದೆ ಎಂದು ಸಭೆಯಲ್ಲಿ ಮಾತನಾಡಿದ್ದರು.
ಈ ವಿಚಾರವನ್ನು ಪ್ರಾಣಿ ಹಕ್ಕುಗಳ ಸಂರಕ್ಷಣಾ ಕಾರ್ಯಕರ್ತೆ ಹಾಗೂ ಮಾಜಿ ಕೇಂದ್ರ ಸಚಿವೆ ಶ್ರೀಮತಿ ಮೇನಕಾಗಾಂಧಿಯವರು ಹಾಸನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹೆಚ್.ಎಂ.ವಿಶ್ವನಾಥ್‍ರವರು ಹೊಂದಿರುವ ಬಂದೂಕನ್ನು ವಶಪಡಿಸಿಕೊಂಡು ನೋಟೀಸ್ ನೀಡುವಂತೆ ತಿಳಿಸಿರುತ್ತಾರೆ.
ಈಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳು ಹೆಚ್.ಎಂ.ವಿಶ್ವನಾಥ್‍ರವರಿಗೆ ನೋಟೀಸನ್ನು ಜಾರಿಗೊಳಿಸಿರುತ್ತಾರೆ. ಇದು ಸರಿಯಾದ ಕ್ರಮವಲ್ಲ. ಮಾಜಿ ಶಾಸಕರಾದ ಹೆಚ್.ಎಂ ವಿಶ್ವನಾಥ್‍ರವರು ಹೊಂದಿರುವ ಬಂದೂಕನ್ನು ವಶಪಡಿಸಿಕೊಂಡಿದ್ದೇ ಆದಲ್ಲಿ ಇವರ ವಾಸಸ್ಥಳ ಹಾಗೂ ತೋಟಗಳಲ್ಲಿ ಆನೆ ಸಮಸ್ಯೆಯಿದ್ದು ಇವರಿಗೆ ರಕ್ಷಣೆ ನೀಡುವವರು ಯಾರು? ಸದಾ ಕಾಫಿಬೆಳೆಗಾರರ ಪರವಾಗಿ ಕಾಡಾನೆ ಸಮಸ್ಯೆಗಳ ಬಗ್ಗೆ ಬೆಳೆಗಾರರೊಂದಿಗೆ ಸೇರಿ ಹೋರಾಟ ಮಾಡುತ್ತಿರುವ ಮಾಜಿ ಶಾಸಕರಾದ ಹೆಚ್.ಎಂ.ವಿಶ್ವನಾಥ್ ರವರ ಮೇಲೆ ಈ ರೀತಿ ಆರೋಪ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ವಿಶ್ವನಾಥ್ ಬೆಂಬಲಕ್ಕೆ ನಿಂತಿದೆ.
2 ದಶಕಗಳಿಂದ ಕಾಡಾನೆ ಹಾವಳಿ ಆಗಿರುವುದರಿಂದ ಸುಮಾರು 2 ದಶಕಗಳಿಂದ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ 77 ಜನ ಕೂಲಿಕಾರ್ಮಿಕರು ಹಾಗೂ ಬೆಳೆಗಾರರ ಪ್ರಾಣ ಹಾನಿಯಾಗಿದ್ದು, ಇದು ಮಲೆನಾಡಿನ ಬಹುದೊಡ್ಡ ಸಮಸ್ಯೆಯಾಗಿದ್ದು, ಶ್ರೀಮತಿ ಮೇನಕಾಗಾಂಧಿಯವರು ಮಲೆನಾಡು ಭಾಗದ ಕಾಡಾನೆ ಸಮಸ್ಯೆಯ ಬಗ್ಗೆ ಸ್ಥಳಕ್ಕೆ ಬಂದು ವಾಸ್ತವಾಂಶವನ್ನು ತಿಳಿಯಬೇಕಾಗುತ್ತದೆ.
ಶ್ರೀಮತಿ ಮೇನಕಾಗಾಂಧಿಯವರು ಆನೆಗಳಿಗೆ ಅರಣ್ಯದಲ್ಲಿ ಆಹಾರ ಮತ್ತು ನೀರು ದೊರಕಿಸಿಕೊಡುವಂತೆ ಹಾಗೂ ಕಾಡಾನೆಗಳನ್ನು ಅರಣ್ಯದಲ್ಲಿಯೇ ಉಳಿಸಿಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಬೇಕು. ಆಗ ಕಾಫಿ ಬೆಳೆಗಾರರು ಮತ್ತು ರೈತರು ಇವರನ್ನು ಪ್ರಶಂಸಿಸುತ್ತಾರೆ.
ಕಾಫಿ ಬೆಳೆಗಾರರು ಮತ್ತು ಕಾರ್ಮಿಕರು ಸಾವನ್ನಪ್ಪುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಮಟ್ಟದಲ್ಲಿ ಪರಿಹಾರಕೊಟ್ಟಲ್ಲಿ ಈ ಒಂದು ಸಮಸ್ಯೆಯನ್ನು ಬಗೆಹರಿಸಿದ ಕೀರ್ತಿ ಶ್ರೀಮತಿ ಮೇನಕಾಗಾಂಧಿಯವರಿಗೆ ಸಲ್ಲುತ್ತದೆ. ಇಲ್ಲಿನ ಜನರು ಪ್ರಾಣಿಗಳಿಗೆ ಯಾವುದೇ ತೊಂದರೆ ಕೊಡುತ್ತಿಲ್ಲ. ಇದನ್ನು ಮನಗಂಡು ಕಾಡಾನೆ ಸಮಸ್ಯೆಗಳಿಂದ ಈ ಭಾಗದ ರೈತಬೆಳೆಗಾರರಿಗೆ ಮುಕ್ತಿಕೊಡಿಸಬೇಕಾಗಿ ಆಗ್ರಹಿಸಿದ್ದಾರೆ.





