ಕೇಂದ್ರ ಯುವ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಕರಾಟೆ ಫೆಡರೇಷನ್ ಗಳ ಸಂಯುಕ್ತ ಆಶ್ರಯದಲ್ಲಿ ಹಾಸನದಲ್ಲಿ ನಡೆದ ನಾಲ್ಕನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಮೊರಾರ್ಜಿ ದೇಸಾಯಿ ವಸತಿಶಾಲೆ ಕೋಳೂರು ಹಾಗೂ ಶ್ರೀಮತಿ ಇಂದಿರಾ ಗಾಂಧಿ ವಸತಿಶಾಲೆ ಬಾಳೂರು ಮೂಡಿಗೆರೆ ಇಲ್ಲಿನ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಹಾಸನ ಮಲ್ನಾಡ್ ಇಂಜನಿಯರಿಂಗ್ ಕಾಲೇಜು ಆವರಣದಲ್ಲಿ ನಡೆದ ಸ್ಪರ್ಧೆಯ ವಿವಿದ ವಿಭಾಗಗಳಲ್ಲಿ ಒಟ್ಟು 6 ಪ್ರಥಮ, 7 ದ್ವಿತೀಯ, 5 ತೃತೀಯ ಹಾಗೂ 3 ಚತುರ್ಥ ಬಹುಮಾನಗಳನ್ನು ಗಳಿಸಿದ್ದಾರೆ.
ಈ ಮೂಲಕ ರಾಷ್ಟ್ರಮಟ್ಟದಲ್ಲಿ ಗ್ರೂಪ್ ಚಾಂಪಿಯನ್ ಆಗಿ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾರ್ಥಿಗಳನ್ನು ಕರಾಟೆ ತರಬೇತುದಾರರಾದ ರಾಜೇಂದ್ರನ್ ಮತ್ತ ಬೇಬಿಲತಾ ಅವರು ತರಬೇತುಗೊಳಿಸಿದ್ದರು.
ವಿಜೇತ ವಿದ್ಯಾರ್ಥಿಗಳನ್ನು ಮತ್ತು ತರಬೇತುದಾರರನ್ನು, ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ವರ್ಗವನ್ನು ಚಿಕ್ಕಮಗಳೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ನೋಡೆಲ್ ಅಧಿಕಾರಿ ಅರುಣ್ ಫರ್ಟಡೋ, ಚಿಕ್ಕಮಗಳೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಚೈತ್ರಾ ಅವರು ಅಭಿನಂದಿಸಿದ್ದಾರೆ.



