ರೋಚಕ ಹಾಗೂ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಫಿಫಾ ವಿಶ್ವಕಪ್ 2026ರ ಫೈನಲ್ ಮಹಾಸಮರದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ ತಂಡ ಹೊಸ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾನುವಾರ ನಡೆದ ಈ ಹೈ-ವೋಲ್ಟೇಜ್ ಪಂದ್ಯದ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದಾಗ, ಪಂದ್ಯವು ಹೆಚ್ಚುವರಿ ಸಮಯಕ್ಕೆ ಜಾರಿತು. ಹೆಚ್ಚುವರಿ ಸಮಯದ ದ್ವಿತೀಯಾರ್ಧದ ಆರಂಭದಲ್ಲೇ, ಅಂದರೆ ಪಂದ್ಯದ 106ನೇ ನಿಮಿಷದಲ್ಲಿ ಸ್ಪೇನ್ ತಂಡದ ಬದಲಿ ಆಟಗಾರ ಫೆರಾನ್ ಟೊರೆಸ್ ಪಂದ್ಯದ ಏಕೈಕ ಹಾಗೂ ನಿರ್ಣಾಯಕ ಗೋಲು ಬಾರಿಸಿದರು. ಬಾಕ್ಸ್ ಒಳಗೆ ಪುಟಿದು ಬಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಟೊರೆಸ್, ಎಡಗಾಲಿನಿಂದ ಚೆಂಡನ್ನು ಗೋಲು ಪೆಟ್ಟಿಗೆಯ ಮೇಲ್ಭಾಗಕ್ಕೆ ತಳ್ಳುವ ಮೂಲಕ ಸ್ಪೇನ್ಗೆ ಐತಿಹಾಸಿಕ ಜಯ ತಂದುಕೊಟ್ಟರು.
ಪಂದ್ಯದ ದ್ವಿತೀಯಾರ್ಧದ ಇಂಜುರಿ ಟೈಮ್ನಲ್ಲಿ ಅರ್ಜೆಂಟೀನಾದ ಎಂಜೊ ಫೆರ್ನಾಂಡಿಸ್ ಅವರು ಸ್ಪೇನ್ನ ಡಿಫೆಂಡರ್ ಪಾವು ಕುಬಾರ್ಸಿ ಅವರ ವಿರುದ್ಧ ಅಪಾಯಕಾರಿ ಫೌಲ್ ಮಾಡಿದ್ದಕ್ಕಾಗಿ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದರು. ಇದರಿಂದಾಗಿ ಅರ್ಜೆಂಟೀನಾ ಪಂದ್ಯದ ಕೊನೆಯ ಹಂತದಲ್ಲಿ ಕೇವಲ 10 ಆಟಗಾರರೊಂದಿಗೆ ಆಡಬೇಕಾಯಿತು.
ಪಂದ್ಯದ 90 ನಿಮಿಷಗಳ ಅವಧಿಯಲ್ಲಿ ಸ್ಪೇನ್ ಬರೋಬ್ಬರಿ 15 ಬಾರಿ ಗೋಲು ಬಾರಿಸಲು ಯತ್ನಿಸಿದರೆ, ಅರ್ಜೆಂಟೀನಾ ಒಂದು ಬಾರಿಯೂ ಯತ್ನಿಸಲಿಲ್ಲ. ಆದರೆ ಅರ್ಜೆಂಟೀನಾದ ಗೋಲ್ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಗೋಡೆಗಿಂತ ಗಟ್ಟಿಯಾಗಿ ನಿಂತು ಸ್ಪೇನ್ನ 10 ಗೋಲುಗಳ ಯತ್ನವನ್ನು ತಡೆದರು. ಇದು ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಗೋಲ್ಕೀಪರ್ ಒಬ್ಬರು ಮಾಡಿದ ಅತಿ ಹೆಚ್ಚು ಗೋಲುಗಳ ರಕ್ಷಣೆಯಾಗಿದೆ.
ಈ ಐತಿಹಾಸಿಕ ಜಯದೊಂದಿಗೆ ಸ್ಪೇನ್ ಜಗತ್ತಿನ ಫುಟ್ಬಾಲ್ ಇತಿಹಾಸದಲ್ಲೇ ಪುರುಷರ ಹಾಗೂ ಮಹಿಳೆಯರ ಫಿಫಾ ವಿಶ್ವಕಪ್ ಎರಡೂ ಟ್ರೋಫಿಗಳನ್ನು ಏಕಕಾಲದಲ್ಲಿ ಹೊಂದಿರುವ ಮೊದಲ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ.
ಸ್ಪೈನ್ ಎರಡನೇ ಬಾರಿ ಫಿಫಾ ವಿಶ್ವಕಪ್ ಪುಟ್ಭಾಲ್ ಚಾಂಪಿಯನ್ ಆಗಿದೆ. 2010 ರಲ್ಲಿ ಮೊದಲ ಬಾರಿಗೆ ವಿಶ್ವಚಾಂಪಿಯನ್ ಆಗಿತ್ತು.


