ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ (85 ವರ್ಷ) ಅವರು ಇಂದು ಶನಿವಾರ ಸಂಜೆ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರನ್ನ ಕಳೆದ 4 ದಿನಗಳ ಹಿಂದಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ 4:50 ರ ಸುಮಾರಿಗೆ ವಿಧಿವಶರಾಗಿದ್ದಾರೆ.
ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರು 1954 ಮೇ 25 ರಂದು ಹೆಚ್.ಡಿ ದೇವೇಗೌಡರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚೆನ್ನಮ್ಮ ಅವರು ಪತಿ ಹೆಚ್.ಡಿ ದೇವೇಗೌಡ, ಪುತ್ರರಾದ ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಹಾಗೂ ಮಗಳು ಹೆಚ್.ಡಿ. ಅನುಸೂಯ ಅವರನ್ನ ಅಗಲಿದ್ದಾರೆ.
ಆಸ್ಪತ್ರೆ ಪ್ರಕ್ರಿಯೆಗಳು ಮುಗಿದ ಬಳಿಕ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


