ಕಳೆದ ಒಂದು ವಾರದಿಂದ ರಾಜ್ಯದಲ್ಲಿ ವಿವಾದಕ್ಕೆ ಗ್ರಾಸವಾಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐ.ಪಿ.ಎಸ್. ಅಧಿಕಾರಿ ರೂಪಾ ಮೌದ್ಗಿಲ್ ಅವರ ನಡುವಿನ ಕೋಳಿ ಜಗಳವೀಗ ನ್ಯಾಯಾಲಯದ ಮೆಟ್ಟಿಲೇರಿದೆ.
ಈ ಇಬ್ಬರು ಉನ್ನತ ಶ್ರೇಣಿಯ ಅಧಿಕಾರಿಗಳ ನಡುವಿನ ಬಹಿರಂಗ ಮಾತಿನ ಕದನ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮುಜುಗರವನ್ನುಂಟುಮಾಡಿದೆ.
ರೋಹಿಣಿ ಸಿಂಧೂರಿ ಕುರಿತು ರೂಪಾ ಅವರು ತಮ್ಮ ಫೆಸ್ಬುಕ್ ಪುಟದಲ್ಲಿ ಹಂಚಿಕೊಂಡ ಅವರ ಖಾಸಗಿ ಪೋಟೋ ಮತ್ತು ವಿಚಾರಗಳು ವಿವಾದದ ಕಿಡಿ ಹತ್ತಿಸಿತ್ತು. ಹಲವು ವರ್ಷಗಳಿಂದ ಈ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಬಹಿರಂಗವಾಗುವ ಮೂಲಕ ಜನರ ನಡುವೆ ನಗೆಪಾಟಲಿಗೀಡಾಗಿದೆ.
ಇವರಿಬ್ಬರ ಬಹಿರಂಗ ವಾಕ್ಸಮರದಿಂದ ಇಕ್ಕಟ್ಟಿಗೆ ಸಿಲುಕಿದ್ದ ರಾಜ್ಯ ಸರ್ಕಾರ ಇಬ್ಬರನ್ನು ಸ್ಥಳನಿಯೋಜನೆ ಮಾಡದೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗೆಯೇ ಸರ್ವೇ ಇಲಾಖೆ ಕಮಿಷನರ್ ಆಗಿದ್ದ ರೂಪಾ ಅವರ ಪತಿ ಮನಿಸ್ ಮೌದ್ಗಿಲ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.
ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ಈ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಜಗಳ ಈಗ ನ್ಯಾಯಾಲಯದ ಅಂಗಳಕ್ಕೆ ಬಂದು ನಿಂತಿದೆ. ತಮ್ಮ ಮೇಲೆ ಆರೋಪಗಳ ಸುರಿಮಳೆಗೈಯುತ್ತಿರುವ ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ರೂಪಾ ಅವರ ತಮ್ಮ ವಿರುದ್ಧ ಯಾವುದೇ ವಿಚಾರ ಪ್ರಸ್ತಾಪ ಮಾಡದಂತೆ ನಿರ್ಬಂಧಕಾಜ್ಞೆ ನೀಡಬೇಕೆಂದು ರೋಹಿಣಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನನ್ನ ಖಾಸಗಿ ಪೋಟೋಗಳನ್ನು ರೂಪಾ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮೊಬೈಲ್ ನಂಬರ್ ಸಹ ಫೇಸ್ಬುಕ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ. ಇದರಿಂದ ನೂರಾರು ಅಪರಿಚಿತರು ನನಗೆ ಕರೆ ಮಾಡುತ್ತಿದ್ದಾರೆ. ರೂಪಾ ಅವರು ತನ್ನ ವೈಯುಕ್ತಿಕ ತೇಜೋವಧೆಯಲ್ಲಿ ತೊಡಗಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಒಟ್ಟಾರೆಯಾಗಿ ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಇಬ್ಬರು ಮಹಿಳಾ ಅಧಿಕಾರಿಗಳು ತಮ್ಮ ನಡುವಿನ ವೈಯುಕ್ತಿಕ ವಿಚಾರಗಳನ್ನು ಹಾದಿರಂಪ ಬೀದಿರಂಪ ಮಾಡಿಕೊಂಡಿರುವುದು ವಿಪರ್ಯಾಸ. ಸರ್ಕಾರ ಇವರಿಬ್ಬರ ವರ್ತನೆಗೆ ಕಡಿವಾಣ ಹಾಕಿ ಸೂಕ್ತವಾದ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.





