ಅಕ್ರಮ ಸಂಬಂಧದ ಸುಳಿಗೆ ದಂಪತಿಗಳಿಬ್ಬರು ಬಲಿಯಾಗಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಉಗ್ಗೇಹಳ್ಳಿ ಗ್ರಾಮದಲ್ಲಿ ಮೂರು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಜಗದೀಶ್ ಆಚಾರ್ ಅವರ ಪತ್ನಿ ನೇತ್ರಾ ನಾಪತ್ತೆಯಾಗಿದ್ದರು. ಇದೀಗ ಪ್ರಕರಣಕ್ಕೆ ತಿರುವು ಪಡೆದಿದ್ದು, ನಾಪತ್ತೆಯಾಗಿದ್ದ ನೇತ್ರಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಜಗದೀಶ್ ಆಚಾರ್ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 3ರಂದು ಕೊನೆಯುಸಿರೆಳೆದಿದ್ದರು.
ಈ ಬಗ್ಗೆ ಗೋಣಿಬೀಡು ಠಾಣೆಗೆ ದೂರು ನೀಡಿದ್ದ ಜಗದೀಶ್ ಆಚಾರ್ ತಾಯಿ ಯಶೋಧಮ್ಮ ನನ್ನ ಮಗನ ಸಾವಿಗೆ ಆತನ ಹೆಂಡತಿ ನೇತ್ರಾ ಮತ್ತು ಆಕೆಯ ಪ್ರಿಯಕರ ಅಂಗಡಿ ಗ್ರಾಮದ ಧನಂಜಯ ಅವರ ನಡುವಿನ ಅಕ್ರಮ ಸಂಬಂಧವೇ ಕಾರಣ. ಹೆಂಡತಿಯ ಅಕ್ರಮ ಸಂಬಂಧದಿಂದ ಮನನೊಂದು ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ದರಿಂದ ನೇತ್ರಾ ಮತ್ತು ಧನಂಜಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೇಳಿಕೊಂಡಿದ್ದರು. ಈ ಸಂಬಂಧ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ಗಂಡನ ಕುಟುಂಬದವರು ದೂರು ನೀಡುತ್ತಿರುವ ಸುಳಿವರಿತ ನೇತ್ರಾ ಮಾರ್ಚ್ 3ರ ರಾತ್ರಿ ಮನೆಯಿಂದ ಇದ್ದಕ್ಕಿದಂತೆ ನಾಪತ್ತೆಯಾಗಿದ್ದರು. ಕಳೆದ ಎರಡು ದಿನಗಳಿಂದ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಬೆಳಿಗ್ಗೆ ನೇತ್ರಾ ಶವ ಮನೆಯಿಂದ ಸ್ವಲ್ಪ ದೂರದಲ್ಲಿರುವ ಚಂದನ್ ಎಂಬುವವರ ಕಾಫಿ ತೋಟದಲ್ಲಿ ಕಾಫಿ ಗಿಡವೊಂದಕ್ಕೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶವದ ಕಾಲು ನೆಲಕ್ಕೆ ತಾಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಇದು ಆತ್ಮಹತ್ಯೆಯೋ ಆಥವಾ ಕೊಲೆಯೋ ಎಂಬುದು ತನಿಖೆಯಿಂದ ತಿಳಿದುಬರಬೇಕಷ್ಟೇ.
ವಿಷಯ ತಿಳಿದ ಗೋಣಿಬೀಡು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಉಗ್ಗೇಹಳ್ಳಿ ಗ್ರಾಮದ ಕೃಷಿಕ ಜಗದೀಶ್ ಆಚಾರ್ ಮತ್ತು ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದ ನೇತ್ರಾ ಈಗ್ಗೆ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗಳಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿವೆ. ಇದೀಗ ಅಕ್ರಮ ಸಂಬಂಧದ ಸುಳಿಯಿಂದ ದಂಪತಿಗಳಿಬ್ಬರು ಸಾವನ್ನಪ್ಪಿದ್ದು ಚಿಕ್ಕ ಮಕ್ಕಳಿಬ್ಬರು ತಬ್ಬಲಿಯಾಗಿದ್ದಾರೆ.
***************************



