ಮಹಿಳೆಯಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಒಂದೂವರೆ ವರ್ಷದ ನಂತರ ಅರೆಸ್ಟ್ ಮಾಡಿದ ಪ್ರಸಂಗ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯ ತ್ರಿಪುರ ಗ್ರಾಮದಲ್ಲಿ 2021ರ ಆಗಸ್ಟ್ ತಿಂಗಳಲ್ಲಿ ಈ ಘಟನೆ ನಡೆದಿತ್ತು.
ತ್ರಿಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತೆ ಉಮಾ ಎಂಬುವವರು ರಾತ್ರಿ 7 ರ ಸಮಯದಲ್ಲಿ ರಸ್ತೆಯಲ್ಲಿ ಮನೆಯ ಕಡೆ ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ಅವರ ಮೇಲೆ ಹಲ್ಲೆ ನಡೆಸಿ ಸುಮಾರು 12 ಸಾವಿರ ಬೆಲೆಬಾಳುವ ಮೊಬೈಲ್ ಕಿತ್ತುಕೊಂಡು ಹೋಗಿದ್ದ. ಈ ಬಗ್ಗೆ ಅವರು ಬಣಕಲ್ ಠಾಣೆಯಲ್ಲಿ ದೂರು ನೀಡಿದ್ದರು.
ಇದರಿಂದಾಗಿ ಈ ಭಾಗದಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗಿತ್ತು. ರಾತ್ರಿಯಾದ ನಂತರ ಆ ಭಾಗದಲ್ಲಿ ಮಹಿಳೆಯರು ಹೊರಬರಲೇ ಭಯಪಡುತ್ತಿದ್ದರು.
ಪೊಲೀಸರಿಗೂ ಈ ಕೇಸ್ ಸಾಕಷ್ಟು ತಲೆನೋವಾಗಿ ಪರಿಣಮಿಸಿತ್ತು.
ಪ್ರಕರಣ ಮೂಡಿಗೆರೆ ವೃತ್ತ ನಿರೀಕ್ಷಕರ ಕಛೇರಿಗೆ ವರ್ಗಾವಣೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಹಿಡಿಯಲು ನಡೆಸಿದ ಪ್ರಯತ್ನ ಕೈಗೂಡಿರಲಿಲ್ಲ. ಒಂದೂವರೆ ವರ್ಷದ ನಂತರ ಇದೇ ಮಾರ್ಚ್ 3ರಂದು ಆರೋಪಿ ಮಣಿ ಎಂಬಾತನನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣವನ್ನು ಪತ್ತೆ ಹಚ್ಚಲೇ ಬೇಕು ಎಂದು ಮೂಡಿಗೆರೆ ವೃತ್ತನಿರೀಕ್ಷಕರ ಕಛೇರಿಯು ಸದಾ ಒಂದು ಕಣ್ಣಿಟ್ಟಿತ್ತು. ಆರೋಪಿ ತಾನು ಮಹಿಳೆಯಿಂದ ಕಿತ್ತುಕೊಂಡ ಮೊಬೈಲ್ ಅನ್ನು ಬಳಸದೇ ಇದ್ದುದರಿಂದ ಪೊಲೀಸರಿಗೆ ಆತನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಆತ ಮೊಬೈಲ್ ಗೆ ಸಿಮ್ ಹಾಕಿ ಬಳಸುತ್ತಿರುವುದನ್ನು ತಾಂತ್ರಿಕತೆ ಮೂಲಕ ಪತ್ತೆಹಚ್ಚಿದ ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತ್ರಿಪುರ ಗ್ರಾಮದಲ್ಲಿಯೇ ಹಲವು ವರ್ಷಗಳಿಂದ ಕಾಫಿ ಎಸ್ಟೇಟ್ ಒಂದರಲ್ಲಿ ಕೂಲಿ ಲೈನಿನಲ್ಲಿ ವಾಸವಾಗಿದ್ದ ಆರೋಪಿ ಮಣಿ ಮೂಲತಃ ಮೂಡಿಗೆರೆ ತಾಲ್ಲೂಕಿನ ಕಾರಬೈಲು ಗ್ರಾಮದವನು ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ, ಸಿಬ್ಬಂದಿಗಳಾದ ಗಿರೀಶ್ ಮತ್ತು ಮನು ಭಾಗವಹಿಸಿದ್ದರು.
********************



