2023-24ನೇ ಶೈಕ್ಷಣಿಕ ಸಾಲಿನ ಶಾಲಾ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಈ ಸಾಲಿನ ಮೊದಲನೇ ಶೈಕ್ಷಣಿಕ ಅವಧಿಯು ಮೇ 29, 2023 ರಿಂದ ತರಗತಿಗಳು ಆರಂಭವಾಗಲಿವೆ.
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಜ್ಯಾದ್ಯಂತ 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುತ್ತಿದ್ದು, ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ.
ಈ ಮಾರ್ಗಸೂಚಿಯಲ್ಲಿ ವಾರ್ಷಿಕ/ ಮಾಹೆವಾರು ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಪರೀಕ್ಷೆ ಮತ್ತು ಮೌಲ್ಯಾಂಕನ ವಿಶ್ಲೇಷಣೆ, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ ಸಿಸಿಇ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯ ಆಗುವಂತೆ ಶೈಕ್ಷಣಿಕ ಅವಧಿಗಳು, ರಜಾದಿನಗಳನ್ನು ಯೋಜಿಸಿ ಸಿದ್ಧಪಡಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
2023-24ನೇ ಮೊದಲನೇ ಶೈಕ್ಷಣಿಕ ಅಧಿವೇಶನವು ಮೇ 29 ರಿಂದ ಅಕ್ಟೋಬರ್ 7 ರವರಗೆ ನಡೆಯಲಿದೆ. ಎರಡನೇ ಶೈಕ್ಷಣಿಕ ಅಧಿವೇಶನವು ಅಕ್ಟೋಬರ್ 25, 2023 ರಿಂದ ಆರಂಭವಾಗಿ ಏಪ್ರಿಲ್ 10, 2024 ಕ್ಕೆ ಮುಕ್ತಾಯವಾಗಲಿದೆ.
ಇನ್ನು ಮಧ್ಯಂತರ ರಜೆ 2023ರ ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ ಇರಲಿದೆ. ಬೇಸಿಗೆ ರಜೆ 2024ರ ಏಪ್ರಿಲ್ 11 ರಿಂದ ಮೇ 28 ರ ವರೆಗೆ ನೀಡಲಾಗಿದೆ.
ಪ್ರಸಕ್ತ ವರ್ಷದ 365ದಿನಗಳಲ್ಲಿ 121 ರಜಾದಿನಗಳಾಗಿದ್ದು, 244 ಶಾಲಾ ಕರ್ತವ್ಯದ ದಿನಗಳಾಗಿರುತ್ತವೆ. ಈ 244 ರಲ್ಲಿ 26 ದಿನಗಳು ಪರೀಕ್ಷೆ ಮತ್ತು ಮೌಲ್ಯಾಂಕನಕ್ಕೆ ಬಳಕೆಯಾದರೆ, 24 ದಿನಗಳು ಪಠ್ಯೇತರ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. 10 ದಿನಗಳು ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆಗೆ ವಿನಿಯೋಗವಾಗಲಿದೆ. 4 ದಿನಗಳು ಸ್ಥಳೀಯ ರಜೆಗಳಿಗೆ ಅವಕಾಶವಿದ್ದು ಉಳಿದಂತೆ 180 ದಿನಗಳು ಪಠ್ಯಭೋದನೆ ಮತ್ತು ಕಲಿಕೆಗೆಂದು ವಿನಿಯೋಗವಾಗಲಿವೆ.
ಕ್ರಿಸ್ ಮಸ್ ರಜೆಯ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪನಿರ್ದೆಶಕರಿಗೆ ಸಲ್ಲಿಸಬೇಕು. ಡಿಸೆಂಬರ್ ನಲ್ಲಿ ನೀಡುವ ಕ್ರಿಸ್ ಮಸ್ ರಜೆಯನ್ನು ಅಕ್ಟೋಬರ್ ನಲ್ಲಿ ನೀಡುವ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಿಕೊಳ್ಳಬೇಕು ಎಂದು ಶೈಕ್ಷಣಿಕ ಇಲಾಖೆ ಮಾಹಿತಿ ನೀಡಿದೆ.



