ನಿರಂತರ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ತಾಲೂಕು ಅಧ್ಯಕ್ಷ ಶಾಂತಕುಮಾರ್ ಅಭಿಪ್ರಾಯಪಟ್ಟರು.
ಅವರು ಭಾನುವಾರ ಪಟ್ಟಣದ ಲ್ಯಾಂಪ್ಸ್ ಸಭಾಂಗಣದಲ್ಲಿ ಹೆಜ್ಜೆ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ದೃಢ ನಿರ್ಧಾರದೊಂದಿಗೆ ನಿಶ್ಚಿತ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಬಹುತೇಕ ವಿದ್ಯಾರ್ಥಿಗಳಲ್ಲಿ ಆರಂಭ ಶೂರತ್ವವು ಅವರು ಯಶಸ್ಸಿನತ್ತ ಸಾಗದಂತೆ ತಡೆಯುತ್ತದೆ. ತಂತ್ರಜ್ಞಾನದ ಫಲವಾಗಿ ಇಂದು ಇಡೀ ವಿಶ್ವವೇ ಬೆರಳ ತುದಿಯಲ್ಲಿದ್ದು, ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಆದರೆ ತಂತ್ರಜ್ಞಾನವನ್ನು ಅಗತ್ಯ ವಿಷಯಕ್ಕೆ ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಯಶಸ್ಸಿಗೆ ಅಡ್ಡಿಯಾಗಿದೆ ಎಂದು ಹೇಳಿದರು.

ಕೊಪ್ಪ ಸರಕಾರಿ ಶಾಲೆಯ ಶಿಕ್ಷಕ ಪ್ರದೀಪ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣವು ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಹಲವು ವರ್ಷಗಳ ಕಾಲ ತಪಸ್ಸಿನಂತೆ ಓದಿ, ಫಲಿತಾಂಶದಲ್ಲಿ ಅತ್ಯಲ್ಪ ಅಂಕದಿಂದ ಉದ್ಯೋಗ ವಂಚಿತರಾದಾಗ ವ್ಯರ್ಥ ಮಾಡಿದ ಸಮಯದ ಅರಿವಾಗುತ್ತದೆ. ಮೊಬೈಲ್ ದೂರವಿರಿಸಿ ಓದಿದರೆ ಶೂನ್ಯದಿಂದಲೂ ಯಶಸ್ವಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಹಳೆ ವಿದ್ಯಾರ್ಥಿನಿಯಾದ ಪಿಡಿಓ ಸಿಂಚನ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ವಾಸುದೇವ್ ಸಾಮಾನ್ಯ ಜ್ಞಾನ ಹಾಗೂ ಐಚ್ಛಿಕ ವಿಷಯಗಳ ಬಗ್ಗೆ ಕಾರ್ಯಾಗಾರ ನಡೆಸಿದರು. ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಎಂ.ಎಸ್.ನಾಗರಾಜ್ ಸಂಸ್ಥೆಯ ಅಬ್ದುಲ್ ನಾಝಿಂ, ಪರಮೇಶ್, ಪವನ್ ಇದ್ದರು.



