ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಸಮೀಪದ ಹಕ್ಕೇರುದ್ದಿ ಗ್ರಾಮದಲ್ಲಿ ನಡೆದಿದೆ. ಹಕ್ಕೇರುದ್ದಿ ಗ್ರಾಮದ ದರ್ಶನ್ ಪೂಜಾರಿ ಎಂಬುವವರ ಪತ್ನಿ ಶ್ವೇತಾ (32) ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ದೈವಿ.
ಹಕ್ಕೇರುದ್ದಿ ಬಾಬು ಪೂಜಾರಿ ಎಂಬುವವರ ಪುತ್ರ ದರ್ಶನ್ ಬೆಂಗಳೂರಿನಲ್ಲಿ ತನ್ನದೇ ಸ್ವಂತ ಮಡಿಕಲ್ ಲ್ಯಾಬ್ ವ್ಯವಹಾರ ನಡೆಸುತ್ತಿದ್ದು, ಕುಟುಂಬ ಸಮೇತ ಅಲ್ಲಿಯೇ ವಾಸವಾಗಿದ್ದರು.
ಮೃತ ಮಹಿಳೆಯ ಪೋಷಕರು ದರ್ಶನ್ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಪತ್ನಿ ಶ್ವೇತಾ ಮೃತಪಟ್ಟ ಬಳಿಕ ದರ್ಶನ್ ಮನೆಯವರು ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದರು. ಆದರೆ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಅಂತ್ಯಕ್ರಿಯೆ ತಡೆದು ಪೊಲೀಸ್ ದೂರು ನೀಡಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಗ್ಯವಾಗಿದ್ದ ಮಗಳು ಹೃದಯಾಘಾತದಿಂದ ಸಾವಿಗೀಡಾಗಲು ಸಾಧ್ಯವಿಲ್ಲ. ನಮ್ಮ ಮಗಳಿಗೆ ವಿಷದ ಇಂಜೆಕ್ಷನ್ ಚುಚ್ಚಿ ಪತಿ ಹಾಗೂ ಆತನ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಮೃತ ಶ್ವೇತಾ ಕುಟುಂಬದವರು ಆರೋಪ ಮಾಡಿದ್ದಾರೆ.
ಮೃತ ಶ್ವೇತಾ ಅವರ ಸಹೋದರ ಚೆನ್ನೋಜಿ ರಾವ್ ಬಿನ್ ಖಂಡೋಜಿ ರಾವ್, ಮರಾಠಿ ಜನಾಂಗ, ಮಾವಿನಕೆರೆ ಗ್ರಾಮ, ಕಳಸ ತಾಲ್ಲೂಕು ಇವರು ಗೋಣಿಬೀಡು ಠಾಣೆಗೆ ನೀಡಿರುವ ದೂರಿನ ಸಾರಾಂಶ ಹೀಗಿದೆ :
ನನ್ನ ಅಕ್ಕ ಶ್ವೇತಳಿಗೆ ಹಾಗೂ ದರ್ಶನ್ ಪೂಜಾರಿ ಎಂಬುವವರಿಗೆ ಸುಮಾರು 7 ವರ್ಷದ ಹಿಂದೆ ಮದುವೆ ಆಗಿರುತ್ತದೆ. ಇವರಿಬ್ಬರಿಗೆ 4 ವರ್ಷದ ಗೃಹಿತ್ ಎಂಬ ಗಂಡು ಮಗು ಸಹ ಇರುತ್ತದೆ. ಇವರಿಬ್ಬರು ಬೆಂಗಳೂರಿನಲ್ಲಿ ವಾಸವಿದ್ದು ಮೊನ್ನೆ ಡಿಸೆಂಬರ್ 6ನೇ ತಾರೀಖು ಅವರ ಸ್ವಂತ ಮನೆಯಾದ ಗೋಣಿಬೀಡು ಹೋಬಳಿಯ ದೇವರುಂದ ಸಮೀಪದ ಹಕ್ಕೇರುದ್ದಿಗೆ ಬಂದಿರುತ್ತಾರೆ. ಕೆಲ ಸಮಯದಿಂದ ಸದರಿ ದರ್ಶನ್ ಪೂಜಾರಿಯವರಿಗೆ ಅಶ್ವಿನಿ ಎಂಬುವವಳೊಂದಿಗೆ ವಿವಾಹೇತರ ಅಕ್ರಮ ಸಂಬಂಧವಿದ್ದು, ಆ ಸಲುವಾಗಿ ನನ್ನ ಅಕ್ಕ ಶ್ವೇತಾಳಿಗೆ ವಿವಾಹ ವಿಚ್ಚೇದನೆ ನೀಡುವಂತೆ ಚಿತ್ರಹಿಂಸೆ ನೀಡಿ ಪೀಡಿಸುತ್ತಿದ್ದರು. ಈ ಬಗ್ಗೆ ನನ್ನ ಅಕ್ಕ ನನ್ನಲ್ಲಿ ಹೇಳಿಕೊಂಡಿದ್ದಳು. ಅನಂತರ ಈ ಬಗ್ಗೆ ಅವರ ಕುಟುಂಬದವರು ಸದರಿ ದರ್ಶನ್ ಪೂಜಾರಿಯವರಿಗೆ ಬುದ್ದಿವಾದವನ್ನು ಹೇಳಿದ್ದರು.
ಇತ್ತೀಚೆಗೆ ನನ್ನ ಅಕ್ಕ ದೀಪಾವಳಿಗೆಂದು ನಮ್ಮ ಮನೆಗೆ ಬಂದಂತಹ ಸಂದರ್ಭದಲ್ಲಿ ಸದರಿ ದರ್ಶನ್ ಪೂಜಾರಿ, ಅವರ ಅಣ್ಣ ದೀಪಕ್ ಪೂಜಾರಿ, ನನ್ನ ಅಕ್ಕನ ಮಾವ ಬಾಬು ಪೂಜಾರಿ ಮತ್ತು ಅತ್ತೆ ಗೌರಮ್ಮನವರು ದಿನ ನಿತ್ಯ ಹೊಡೆದು ಚಿತ್ರ ಹಿಂಸೆ ನೀಡುವ ಬಗ್ಗೆ ಹೇಳಿಕೊಂಡಿದ್ದಳು. ಅಲ್ಲದೇ ಮೇಲ್ಕಾಣಿಸಿದ ದರ್ಶನ್ ಪೂಜಾರಿ, ದೀಪಕ್ ಪೂಜಾರಿ, ಬಾಬು ಪೂಜಾರಿ ಮತ್ತು ಗೌರಮ್ಮ ರವರು ಸಾಯಿಸಿ ಬಿಡುತ್ತಾರೆ ಎಂದು ಸಹ ಹೇಳಿಕೊಂಡಿದ್ದಳು.
ಹೀಗಿರುವಲ್ಲಿ ಇಂದು(ಸೋಮವಾರ) ಬೆಳಿಗ್ಗೆ ದರ್ಶನ್ ಪೂಜಾರಿಯವರ ಅಣ್ಣ ದೀಪಕ್ ಪೂಜಾರಿಯವರು ಬೆಳಗ್ಗೆ 05.24 ಗಂಟೆಗೆ ನನಗೆ ಕರೆ ಮಾಡಿ ನಿನ್ನ ಅಕ್ಕನಿಗೆ ಎದೆ ನೋವು ಕಾಣಿಸಿಕೊಂಡಿದೆ, ನಿನ್ನ ಭಾವ ಚಿಕ್ಕಮಗಳೂರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ತಿಳಿಸಿರುತ್ತಾರೆ. ಅನಂತರ ನನ್ನ ಭಾವನ ಬಳಿ ವಿಚಾರಿಸಿದಾಗ , ಹಾಗೇನಿಲ್ಲ ಸರಿ ಇದ್ದಾಳೆ ಎಂದು ತಿಳಿಸಿರುತ್ತಾರೆ. ಸ್ವಲ್ಪ ಹೊತ್ತಲ್ಲೇ ದೀಪಕ್ ಪೂಜಾರಿಯವರು 06.12 ಗಂಟೆಗೆ ಕರೆ ಮಾಡಿ ನಿನ್ನ ಅಕ್ಕ ತೀರಿ ಹೋದಳು ಎಂದು ತಿಳಿಸಿರುತ್ತಾರೆ. ನಾನು ಕೂಡಲೇ ಅವರ ಮನೆಗೆ ತೆರಳಿ ನೋಡಿದಾಗ ನನ್ನ ಅಕ್ಕ ಶ್ವೇತಳು ಕೊಲೆ ಆಗಿರುವ ಸ್ಥಿತಿಯಲ್ಲಿ ಕಂಡು ಬಂದಿರುತ್ತಾಳೆ. ಅಲ್ಲದೇ ನನ್ನ ಅಕ್ಕನ ಶವದ ಬಳಿ ಕೆಲವು ಇಂಜಕ್ಷನ್ ಟ್ಯೂಬ್ಗಳು ಸಹ ಕಂಡು ಬಂದಿರುತ್ತದೆ. ದರ್ಶನ್ ಪೂಜಾರಿಯವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ಕಾರಣ ಯಾವುದಾದರೂ ವಿಷಪೂರಿತ ಸಿರಿಂಜ್ ನಿಂದ ಕೊಲೆ ಮಾಡಿರುವ ಸಾಧ್ಯತೆ ಇರುತ್ತದೆ. ಹಾಗೆಯೇ ಬೇರೆ ಯಾವುದೇ ರೀತಿಯಿಂದಲೂ ಕೊಲೆ ಮಾಡಿರುತ್ತಾರೆ.

ಅಲ್ಲದೇ ನನ್ನ ಅಕ್ಕನ ಮೊಬೈಲ್ನಲ್ಲಿದ್ದ ಎಲ್ಲಾ ದಾಖಲೆಗಳು ಅಳಿಸಿ ಹೋಗಿದೆ. ಈ ಬಗ್ಗೆ ನಾನು ನೊಂದು ಹೋಗಿದ್ದರಿಂದ ಮತ್ತು ನನ್ನ ಕುಟುಂಬದವರಿಗೆಲ್ಲ ತಿಳಿಸಿ ಅವರೆಲ್ಲ ಬರುವಾಗ ತಡವಾದ ಕಾರಣ, ಅವರು ಬಂದ ನಂತರ ನಾನು ಈಗ ರಾತ್ರಿ 9 ಗಂಟೆಗೆ ಬಂದು ಈ ದೂರನ್ನು ದಾಖಲಿಸುತ್ತಿದ್ದೇನೆ. ಆದ್ದರಿಂದ ಮೇಲ್ಕಾಣಿಸಿದ ವಿಚಾರಣೆ ನಡೆಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಕೊಡಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ಎಂದು ದೂರು ದಾಖಲಿಸಿದ್ದಾರೆ.
ಈ ದೂರಿನ ಮೇರೆಗೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪೋಷಕರು ನೀಡಿದ ದೂರಿನನ್ವಯ ಶ್ವೇತಾ ಪತಿ ದರ್ಶನ್ ಮತ್ತು ಆತನ ಅಣ್ಣ ದೀಪಕ್ ಇವರುಗಳನ್ನು ಗೋಣಿಬೀಡು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮೃತ ದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರು ಮೃತರ ತವರು ಮನೆ ಕಳಸದಲ್ಲಿ ಅಂತಿಮ ಸಂಸ್ಕಾರ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಈ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಹಿಂದೆ ವಿವಾಹೇತರ ಸಂಬಂಧದ ಕರಿನೆರಳು ಇದ್ದಂತೆ ಕಾಣುತ್ತಿದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗೆಳೆಯಬೇಕು ಎಂದು ಸ್ಥಳೀಯರು ಮತ್ತು ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ.

ಶ್ವೇತಾ ಸಾವಿಗೆ ಮುನ್ನ ಮಾತಾಡಿದ ಆಡಿಯೋ ವೈರಲ್:
ಈ ನಡುವೆ ಶ್ವೇತಾ ಸಾವಿಗೆ ಮುನ್ನ ತನ್ನ ಪತಿಯ ಸಹೋದ್ಯೋಗಿ ಜೊತೆ ಮಾತಾಡಿರುವ ಆಡಿಯೋ ಒಂದು ವೈರಲ್ ಆಗಿದೆ.
ದರ್ಶನ್ ಪತ್ನಿ ಶ್ವೇತಾ ಜೊತೆ ದರ್ಶನ್ ಲವರ್ ಮಾತನಾಡಿರೋ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ದರ್ಶನ ಲವರ್ ಜೊತೆ ಶ್ವೇತಾ ಮಾತಾಡಿದ್ದಾಳೆ, ನಾವು ಲವ್ ಮಾಡಿ ಮದುವೆಯಾಗಿ ಜೀವನ ಮಾಡ್ತಿದ್ದೇವೆ. ಯಾರದೋ ಕಾಲಿಡಿದು ಎಲ್ಲೋ ಮದುವೆ ಆಗಿದ್ವಿ. ಆಮೇಲೆ ಮನೆಯವರು ಮತ್ತೆ ಮದುವೆ ಮಾಡಿದ್ರು. ಕಷ್ಟಪಟ್ಟು ಮೇಲೆ ಬಂದಿದ್ದೇವೆ. ನನ್ನ ಗಂಡ ನನ್ನನ್ನು ರಿಕ್ವೆಸ್ಟ್ ಮಾಡಿ ಲವ್ ಮಾಡಿ ಮದುವೆಯಾದ್ರು. ರಾಣಿ ತರಾ ನೋಡ್ಕೊಂತಿನಿ ಕಣ್ಣೀರುಹಾಕ್ಸಲ್ಲ ಅಂದಿದ್ರು. ಆದರೆ ನೀನು ನನಗೆ ಮೋಸ ಮಾಡ್ತಿದ್ದಿಯಾ.
ನಿನಗೆ ಈಗಾಗಲೇ ತುಂಬಾ ಸಲ ಹೇಳಿದ್ದೀನಿ ಈ ತಪ್ಪು ಮಾಡಬೇಡ ಅಂತಾ ಆದ್ರೂ ಮತ್ತೆ ಸೋಮವಾರ ಅದೇ ತಪ್ಪು ಮಾಡಿದ್ದೀರಿ. ನಮ್ಮ ಬದುಕಿನಲ್ಲಿ ನೀನು ಬರಬೇಡ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡು ಎಂದು ಶ್ವೇತಾ ಬೇಡಿಕೊಂಡಿರೋದು ಆಡಿಯೋದಲ್ಲಿದೆ. ದರ್ಶನ್ ಲವರ್ ಕೊನೆ ತಪ್ಪು ಮಾಡಿದ್ದು ಒಪ್ಪಿಕೊಂಡಿರೋ ದರ್ಶನ ಲವರ್ ಇನ್ಮುಂದೆ ಆ ತಪ್ಪು ಮಾಡಲ್ಲ ಎಂದಿರೋದು ಆಡಿಯೋದಲ್ಲಿ ದಾಖಲಾಗಿದೆ.



