ಮಹಿಳೆಯರು ಸೇವಾಕಾರ್ಯಗಳಲ್ಲಿ ಆಸಕ್ತಿ ವಹಿಸಬೇಕೆಂದು ಚಿಕ್ಕಮಗಳೂರು ಮಹಿಳಾಜಾಗೃತಿ ಸಂಘದ ಅಧ್ಯಕ್ಷೆ ಸುಲೋಚನಾಶೇಖರ್ ಕರೆ ನೀಡಿದರು.
ನಗರದ ಟಿಎಂಎಸ್ ಆವರಣದ ರೋಟರಿಸಭಾಂಗಣದಲ್ಲಿ ಮಹಿಳಾಜಾಗೃತಿ ಸಂಘ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಹಾಗೂ 37ನೆಯ ಸರ್ವಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
1983ರಲ್ಲಿ ಗೌರಮ್ಮಬಸವೇಗೌಡರ ನೇತೃತ್ವದಲ್ಲಿ ಆರಂಭಗೊಂಡ ಮಹಿಳಾಜಾಗೃತಿ ಸಂಘ ನಾಲ್ಕುದಶಕಗಳಲ್ಲಿ ನಗರದ ಮಹಿಳೆಯರನ್ನು ಸಂಘಟಿಸುವುದರೊಂದಿಗೆ ಜಾಗೃತಿಗೊಳಿಸಲು ಅರಿವು ಮೂಡಿಸುವಲ್ಲಿ ಸಾರ್ಥಕ ಕಾರ್ಯ ಮಾಡಿದೆ. ಮನೆಗೆ ಸೀಮಿತರಾಗಿದ್ದ ಅನೇಕ ಮಹಿಳೆಯರನ್ನು ಸಮಾಜಮುಖಿಯಾಗಿಸುವಲ್ಲಿ ಶ್ರಮಿಸಿದೆ. ಸಣ್ಣಪುಟ್ಟ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ ಎಂದ ಸುಲೋಚನಾ, ಸೇವೆ ಮಾಡುವುದರಲ್ಲಿ ಇರುವ ಸಂತೋಷದ ಅರಿವು ಮೂಡಿಸಿದೆ ಎಂದರು.
ಮನರಂಜನೆ, ಪ್ರತಿಭಾ ಪ್ರದರ್ಶನದ ಜೊತೆಗೆ ಸಮಾಜಕ್ಕೆ ಅಗತ್ಯವಾದ ಸೇವೆಯನ್ನು ಸಲ್ಲಿಸÀುವುದು ಶ್ರೇಯಸ್ಕರ. ಶಾಲೆಗಳು, ವೃದ್ಧಾಶ್ರಮ, ಅಂಧಮಕ್ಕಳಶಾಲೆ, ವಿಕಲಚೇತನರ ತಾಣಗಳಿಗೆ ಭೇಟಿನೀಡಿ ಒಂದಷ್ಟು ಸಮಯವನ್ನು ಅವರ ಜೊತೆಗೆ ವಿನಿಯೋಗಿಸಿ ಸಣ್ಣಪುಟ್ಟ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ನಿಜವಾದ ಸಂತೋಷಕಾಣಬಹುದು. 500ಕ್ಕೂ ಹೆಚ್ಚು ಸದಸ್ಯರಿದ್ದು ಎಲ್ಲರೂ ಒಂದಿಲ್ಲೊಂದು ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಜಾಗೃತಿ ಸಂಘದ ಹಿರಿಮೆಯೂ ಹೆಚ್ಚುತ್ತದೆ ಎಂದರು.
ಸಮಾಜಕ್ಕಾಗಿ ವಿಶಿಷ್ಟಸೇವೆ ಸಲ್ಲಿಸಿದವರನ್ನು ಪ್ರತಿ ಮೂರುವರ್ಷಕ್ಕೊಮ್ಮೆ ಗೌರವಿಸುವ ಪರಿಪಾಠ ಹೊಂದಿದ್ದೇವೆ. ಸಾಲುಮರದತಿಮ್ಮಕ್ಕ ಅವರಿಗೆ ಮೊದಲಬಾರಿಗೆ ಗುರುತಿಸಿ ಮಹಿಳಾರತ್ನ ಪ್ರಶಸ್ತಿನೀಡಿ ಗೌರವಿಸಿದ್ದು ಜಾಗೃತಿ ಸಂಘ ಎಂಬುದು ಅಭಿಮಾನದ ಸಂಗತಿ ಎಂದ ಸುಲೋಚನಾ, ನಾಡಿನ ಸಾಧಕರುಗಳಾದ ಬಿ.ಕೆ.ಸುಮಿತ್ರಾ, ಮೋಟಮ್ಮ, ಸುಬ್ಬಮ್ಮ, ಇಂದೂವಿಶ್ವನಾಥ್, ಸಂಧ್ಯಾಪೈ, ಮೋಹಿನಿಸಿದ್ದೇಗೌಡ ಸೇರಿದಂತೆ ಹಲವರನ್ನು ಗೌರವಿಸುವ ಮೂಲಕ ಸಂಘದ ಪ್ರತಿಷ್ಠೆಯೂ ಎತ್ತರಕ್ಕೇರಿದೆ ಎಂದರು.
ಪ್ಯಾರಾ ಒಲಂಪಿಕ್ಸ್‍ನಲ್ಲಿ ಪದಕಪಡೆದ ನಮ್ಮೂರಿನ ಆಶಾಕಿರಣದಲ್ಲಿ ಅಧ್ಯಯನ ಮಾಡಿದ ಮೂವರು ವಿದ್ಯಾರ್ಥಿನಿಯರಿಗೆ ತಲಾ 5,000ರೂ. ನೀಡುವುದರೊಂದಿಗೆ ಇಂದು ಗೌರವಿಸಲಾಗುತ್ತಿದೆ ಎಂದ ಸುಲೋಚನಾ, ಪುಸ್ತಕ, ಬೀರು, ಟಿ.ವಿ., ರ್ಯಾಕ್, ಕುರ್ಚಿ-ಟೇಬಲ್, ಯುಪಿಎಸ್, ಶುದ್ಧನೀರಿನಘಟಕ, ಅಡುಗೆಮನೆ ಪರಿಕರಗಳು, ಪಾಠೋಪಕರಣ ಮತ್ತು ಆಟೋಪಕರಣಗಳನ್ನು ಈವರೆಗೂ ಅಗತ್ಯವಿರುವವರಿಗೆ ವಿತರಿಸಿದೆ. ಎಲ್ಲ ಸದಸ್ಯರೂ ಮುಂಬರುವ ದಿನಗಳಲ್ಲಿ ಕ್ರಿಯಾಶೀಲರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಸಂಘಟನೆಯನ್ನು ಮುನ್ನಡೆಸಬೇಕಾಗಿದೆ ಎಂದರು.
ಪ್ಯಾರಾಒಲಂಪಿಕ್ಸ್ ಚಿನ್ನದಪದಕ ವಿಜೇತೆ ಮೂಡಿಗೆರೆಯ ರಕ್ಷಿತಾರಾಜು ಮತ್ತು ಆಕೆಯ ತರಬೇತುದಾರ ರಾಹುಲ್‍ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಕಾತ್ಯಾಯಿನಿಸಿ.ಶೇಖರ್ ಅಭಿನಂದಿಸಿದರು.
ರಕ್ಷಿತಾರಾಜು ಮಾತನಾಡಿ ತಂದೆ-ತಾಯಿಯರನ್ನು ಕಳೆದುಕೊಂಡು ಅಜ್ಜಿಯ ಪಾಲನೆ ಪೋಷಣೆಯಲ್ಲಿ ಬೆಳೆದ ತಮಗೆ ಡಾ.ಕೃಷ್ಣೇಗೌಡರ ಆಶಾಕಿರಣ ವ್ಯಕ್ತಿತ್ವರೂಪಿಸಿಕೊಳ್ಳುವಲ್ಲಿ ದಶಕಗಳ ಕಾಲ ಹೆಚ್ಚಿನ ಸಹಾಯ ಮಾಡಿದೆ. ಕ್ರೀಡೆಯ ಸಾಧನೆಗೆ ಪ್ರೋತ್ಸಾಹ ಸಿಕ್ಕಿದ್ದರಿಂದಾಗಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪದಕ ಗಳಿಸುವಂತಾಯಿತು. ಪ್ರಧಾನಮಂತ್ರಿ ನರೇಂದ್ರಮೋದಿ ಅವರೂ ಆಹ್ವಾನಿಸಿ ಅಭಿನಂದಿಸಿದ್ದು ಜೀವಿತದ ಅವಿಸ್ಮರಣೀಯ ಸಂದರ್ಭ. ನನ್ನ ಜಿಲ್ಲೆಯಲ್ಲೂ ಪ್ರೀತಿವಿಶ್ವಾಸ ತೋರುತ್ತಿರುವುದು ಹೆಚ್ಚಿನ ಗುರಿಸಾಧನೆಗೆ ಸಹಕಾರಿ ಎಂದ ರಕ್ಷಿತಾ, ಪ್ರಸ್ತುತ ಪದವಿ 2ನೆಯ ವರ್ಷದ ಅಧ್ಯಯನ ಮಾಡುತ್ತಿದ್ದು ಮುಂದೆ ಐಎಎಸ್ ಮಾಡುವ ಉದ್ದೇಶವಿದೆ ಎಂದರು.
ಆಟೋಟಸ್ಪರ್ಧಾ ವಿಜೇತರಿಗೆ ಖಜಾಂಚಿ ಸುಲೋಚನಮ್ಮಶ್ರೀನಿವಾಸಶೆಟ್ಟಿ ಮತ್ತು ಉಪಾಧ್ಯಕ್ಷೆ ಕೃಷ್ಣೇವೇಣಿಗೋಪಾಲ ಬಹುಮಾನ ವಿತರಿಸಿದರು. ನಿರ್ದೇಶಕರುಗಳಾದ ಗುಣವತಿ, ರೇಣುಕಾಪ್ರಸನ್ನ, ಡಿ.ಎಸ್.ಮಮತಾ, ಸಿ.ಎಂ.ಹೇಮಾ, ಕವಿತಾಗೋಪಾಲ್ ಮತ್ತಿತರರು ವೇದಿಕೆಯಲ್ಲಿದ್ದರು.
ಸಹಕಾರ್ಯದರ್ಶಿ ಗೀತಾಸುಂದ್ರೇಶ್ ನಿರೂಪಿಸಿ, ನಿರ್ದೇಶಕರುಗಳಾದ ಶೈಲಾಚಲುವಯ್ಯ ಸ್ವಾಗತಿಸಿ, ಯಶೋಧಶಿವಪ್ಪ ಪ್ರಾರ್ಥಿಸಿದರು. ಗೀತಾಎಂ.ಎಲ್.ಮೂರ್ತಿ ನಡವಳಿ, ಪಾರ್ವತಿಬಸವರಾಜ್ ವರದಿ ಮಂಡಿಸಿದರು. ಭಾರತಿಶಿವರುದ್ರಪ್ಪ ಸನ್ಮಾನಿತರನ್ನು ಪರಿಚಯಿಸಿದರು. ಉಪಾಧ್ಯಕ್ಷೆ ಅರ್ಪಿತಾನಿತಿನ್ ವಂದಿಸಿದರು.

ಪೂಜಾಮಹೇಶ್ ತಂಡದ ನೃತ್ಯ, ಗುಣರತ್ನನಂದೀಶ್ ತಂಡದ ಜಾನಪದನೃತ್ಯ, ಸುಮಾಲೋಕೇಶ್ ತಂಡದ ರಾಮಕೀರ್ತನೆ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನಸೆಳೆದವು. ಇದೇ ಸಂದರ್ಭದಲ್ಲಿ ಅದೃಷ್ಟರಾಣಿ, ಅದೃಷ್ಣವನಿತೆ, ಅದೃಷ್ಟಶಾಲಿನಿ, ಅದೃಷ್ಟ ಸಿರಿ ಪುರಸ್ಕಾರ ನೀಡಿ ಗೌರವಿಸಲಾಯಿತು.


