ಗುಂಡೇಟಿನಿಂದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲ್ಲೂಕು ಉಳುವಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ.
ತಾಲ್ಲೂಕಿನ ಕೆರೆಮಕ್ಕಿ ಗ್ರಾಮದ ಯುವಕ ಸಂಜುಗೌಡ (33 ವರ್ಷ) ಎಂಬಾತ ಗುಂಡೇಟಿನಿಂದ ಮೃತಪಟ್ಟಿರುವ ಯುವಕ.
ಸಂಜು ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿದ್ದು, ಎದೆಯ ಬಲಭಾಗಕ್ಕೆ ತೋಟಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ.

ಮೃತದೇಹದ ಸಮೀಪವೇ ತೋಟದ ಬೇಲಿಯಲ್ಲಿ ಜೋಡು ನಳಿಕೆ ತೋಟಕೋವಿಯೊಂದು ಪತ್ತೆಯಾಗಿದೆ. ಘಟನಾ ಸ್ಥಳದ ಸುಮಾರು ಒಂದು ಕಿ.ಮೀ.ದೂರದಲ್ಲಿ ಬೈಕ್ ಪತ್ತೆಯಾಗಿದೆ.
ಗುರುವಾರ ರಾತ್ರಿ ಸುಮಾರು 8ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಇದು ಆಕಸ್ಮಿಕವಾಗಿ ಗುಂಡು ತಗುಲಿ ಆಗಿರುವ ಸಾವೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ? ಸಂಜು ಜೊತೆಯಲ್ಲಿ ಬೇರೆ ಯಾರ್ಯಾರು ಇದ್ದರು ? ಈ ಬಗ್ಗೆ ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಷ್ಟೇ.
ಮೃತ ಸಂಜು ಕೆರೆಮಕ್ಕಿ ಗ್ರಾಮದ ದಿವಂಗತ ಜೂಲೇಗೌಡ ಎಂಬುವವರ ಪುತ್ರ. ಅವಿವಾಹಿತನಾಗಿದ್ದು, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.



