ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡು, ವಿದೇಶಕ್ಕೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಂಧನಕ್ಕೊಳಪಡಿಸಿದೆ.
ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. ಈತನ ಬಂಧನದೊಂದಿಗೆ ಇದೂವರೆಗೂ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಆರೋಪಿ ಮುಂಬೈ ವಿಮಾನ ನಿಲ್ದಾಣದ ಮೂಲಕ ಪರಾರಿಯಾಗುವ ಯತ್ನದಲ್ಲಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಅಲ್ಲೇ ವಶಪಡಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ವಿದೇಶದಲ್ಲೇ ಇದ್ದ ರಿಯಾಜ್, ನಾಪತ್ತೆಯಾಗಿರುವ ಅಬ್ದುಲ್ ರೆಹಮಾನ್ ಸೂಚನೆ ಪ್ರಕಾರ ಭಾರತಕ್ಕೆ ಮರಳಿದ್ದ. ಇತ್ತೀಚೆಗೆ ಬಂಧಿತನಾಗಿದ್ದ ಮುಸ್ತಫಾ ಪೈಚಾರ್ ಎಂಬ ಆರೋಪಿಗೆ ಸಕಲೇಶಪುರದಲ್ಲಿ ವಾಸ್ತವ್ಯ ಹೂಡಲು ಸಹಕರಿಸಿದ್ದ ಎನ್ನಲಾಗಿದೆ.
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಮಾಜಿ ಕಾರ್ಯದರ್ಶಿ ಮತ್ತು ಸೇವಾ ತಂಡದ ಮುಖ್ಯಸ್ಥ ಪೈಚಾರ್ ಪ್ರಕರಣದ ಮುಖ್ಯ ಸಂಚುಕೋರನಾಗಿದ್ದ. ಈತ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿ, ಆರೋಪಿಗಳ ತಂಡವನ್ನು ಒಟ್ಟುಗೂಡಿ, ಅಪರಾಧದ ಬಳಿಕ ಇತರರೊಂದಿಗೆ ಪರಾರಿಯಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.


